Tuesday 11 July 2023

 

ಟಿ. ಜಿ. ಕುಂಬಾರ್ ಹೊಸಕನಳ್ಳಿ


ಆಧುನಿಕ ನವ ಕರ್ನಾಟಕ:

೧೮೮೧ರಲ್ಲಿ ಮೈಸೂರಿನಲ್ಲಿ ೧೪೪ ಸದಸ್ಯರೊಂದಿಗೆ, ಪ್ರಜಾ ಪ್ರತಿನಿಧಿ ಸಭೆ ಸ್ಥಾಪನೆಯಾಯಿತು. ೧೮೮೧ರಲ್ಲಿ ಮಹಾರಾಣಿ ಬಾಲಕಿಯರ ಪ್ರೌಢಶಾಲೆ ಮೈಸೂರಿನಲ್ಲಿ ಆರಂಭವಾಯಿತು. ೧೮೮೨ರಲ್ಲಿ ಬೆಂಗಳೂರು ಮೈಸೂರು ರೈಲ್ವೆ ಮಾರ್ಗ ಹಾಸಿದರು. ಕೋಲಾರದ ಚಿನ್ನದ ಗಣಿ ಆರಂಭವಾಯಿತು.

೧೯೦೫ರಲ್ಲಿ ಶಿವನ ಸಮುದ್ರ ಅಣೆಕಟ್ಟಿನಿಂದ ವಿದ್ಯುತ್ ಉತ್ಪಾದನೆ ಹಾಗು ಕೋಲಾರದ ಚಿನ್ನದ ಗಣಿ, ಮತ್ತು ಬೆಂಗಳೂರಿಗೆ ವಿದ್ಯುತ್ ಸರಬರಾಜು. ಪ್ರಥಮಬಾರಿಗೆ ಭಾರತದಲ್ಲಿ ವಿದ್ಯುತ್ ದೀಪ ಬೆಳಗಿತು.

೧೮೮೮ರಲ್ಲಿ ಅಮೇರಿಕಾ ದೇಶದಲ್ಲಿ ಮೊದಲಬಾರಿಗೆ ದೂರದಿಂದ ಪರ್ಯಾಯ ವಿದ್ಯುತ್ಪ್ರವಾಹ ರೂಪದಲ್ಲಿ ವಿದ್ಯುತ್ ಸರಬರಾಜು ಮಾಡುವ ತಂತ್ರಗಾರಿಕೆ ಆರಂಭವಾದದ್ದು ನೆನಪಿಸಿಕೊಳ್ಳಬಹುದು.

೧೯೧೬ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಗೊಂಡಿತು. ಮೈಸೂರು ಸಂಸ್ಥಾನದಲ್ಲಿ ಶಾಲೆಗಳ ಸಂಖ್ಯೆ ೪೫೬೮ ರಿಂದ ೧೧೨೯೪ ಕ್ಕೆ ಹೆಚ್ಚಿದವು. ಇದು ಕರ್ನಾಟಕದಲ್ಲಿ ಮೊದಲ ಕಲಿಕಾ ಕೇಂದ್ರವಾಯಿತು.

ದಿವಾನ್ ಸಾರ್ ಎಮ್. ವಿಶ್ವೇಶ್ವರಯ್ಯ [೧೯೧೨-೧೯೧೮]:-ಇವರ ಆಡಳಿತದಲ್ಲಿ, 

೧೯೧೧ರಲ್ಲಿ, ಸುಮಾರು ಆರು ಕೋಟಿ ರೂಪಾಯಿ ವೆಚ್ಚದಲ್ಲಿ, ಕಾವೇರಿ ನದಿಗೆ ಕನ್ನಂಬಾಡಿ[ಕೃಷ್ಣರಾಜ ಸಾಗರ] ಆಣೆಕಟ್ಟು ಕಟ್ಟಿದರು. ಹಾಗೂ 

೧೯೧೬- ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆ ಕೈಗಾರಿಕೆ ನಿರ್ಮಾಣ,  ಎಚ್. ಎ. ಎಲ್. ಕಾರ್ಖಾನೆ, ಮೈಸೂರು ಲ್ಯಾಂಪ್ಸ್ ಕಾರ್ಖಾನೆ, ಮತ್ತು ಶಿವನ ಸಮುದ್ರದಲ್ಲಿ ೪೦೦೦ ಅಶ್ವಶಕ್ತಿಯ ವಿದ್ಯುತ್ ಉತ್ಪಾದನೆ ಆರಂಭಗೊಂಡವು. ಇವರ ಕಾಲದಲ್ಲಿ ೩೭೨ ಮೈಲಿ ಉದ್ದದ ರೈಲ್ವೆ ಮಾರ್ಗವನ್ನು ಹಾಸಲಾಹಿತು. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಯಿತು.

ಮೈಸೂರಿಗೆ ಹೋಲಿಸಿದರೆ ನಮ್ಮ ಬೀದರ ಜಿಲ್ಲೆ ಅರ್ಧ ಶತಮಾನ ಹಿಂದುಳಿಯಿತು.

-----------------------------------------------------------------------

ಹೈದರಾಬಾದ ಕರ್ನಾಟಕ:

ಭಾರತ ಸ್ವತಂತ್ರವಾದ ಒಂದು ವರುಷದ ನಂತರ ನಿಜಾಮನ ಆಳ್ವಿಕೆಯಲ್ಲಿದ್ದ ಹೈದರಾಬಾದ-ಕರ್ನಾಟಕ ಪ್ರದೇಶ ೧೯೪೮ರಲ್ಲಿ ಭಾರತದ ಒಕ್ಕೂಟಕ್ಕೆ ಸೇರಿತು. ಮುಂದೆ ಮುಂಬೈ-ಕರ್ನಾಟಕ, ಹೈದರಾಬಾದ್-ಕರ್ನಾಟಕ, ಮತ್ತು ಹಳೆಯ-ಮೈಸೂರು ವಿಭಾಗಗಳ ಒಕ್ಕೂಟವೇ 'ಕರ್ನಾಟಕ' ಎಂದು ಹೊಸ ಕನ್ನಡ ಮಾತಾಡುವ ಜನರ ರಾಜ್ಯ ಸ್ಥಾಪನೆಗೊಂಡಿತು. ಕರ್ನಾಟಕಕ್ಕೆ ಮೊದಲು ಮೈಸೂರು ರಾಜ್ಯ ಎಂದು ಕರೆಯುತ್ತಿದ್ದರು.

ಬೀದರ್, ಗುಲ್ಬರ್ಗಾ , ರಾಯಚೂರು, ಮತ್ತು ಬಳ್ಳಾರಿ ಜಿಲ್ಲೆಗಳು ಹಳೆಯ ಹೈದರಾಬಾದ್ ಸಂಸ್ಥಾನದಿಂದ ಕರ್ನಾಟಕಕ್ಕೆ ಸೇರಿಕೊಂಡ ಪ್ರದೇಶಗಳು. ಈ ಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ೧೯೬೦ರ ವರೆಗೆ ಶಾಲೆಗಳೇ ಇರಲಿಲ್ಲ. ಮಕ್ಕಳು ಮನಬಂದಂತೆ ಆಡಿಕೊಂಡು ಕಾಲ ಕಳೆಯುತ್ತಿದ್ದರು. ಭಾರತದ ಮೊದಲನೇ ಮತ್ತು ಎರಡನೇ ಪಂಚವಾರ್ಶಿಕ ಯೋಜನೆಗಳು ಕಳೆದ ನಂತರ ನಮ್ಮ ಹಳ್ಳಿಗಳಲ್ಲಿ ಶಾಲೆಗಳು ಆರಂಭವಾಗತೊಡಗಿದವು.

ನಮ್ಮ ಬೀದರ್ ಜಿಲ್ಲೆಯಲ್ಲಿ ನಾನು ಕಂಡ ಬದಲಾವಣೆಗಳು:

೧೯೦೦ರ ಕಾಲದ್ಲಲಿ, ಬೀದರ್ ಜಿಲ್ಲೆಯ ಭಾಗದಲ್ಲಿ ಹೈದರಾಬಾದ ನಿಜಾಮರ ಆಳ್ವಿಕೆ ಇತ್ತು. ಹಳ್ಳಿಗರಿಗೆ ಶಿಕ್ಷಣ ಕಲಿಯಲು ಶಾಲೆಗಳೇ ಇರಲಿಲ್ಲ. ೧೯೦೬ರಲ್ಲಿ ಕ್ರಿಶ್ಚನ್ ಮಿಷನರಿಗಳು ಬೀದರಿನ ಮಂಗಲಪೇಟೆಯಲ್ಲಿ ಪ್ರಾಥಮಿಕ ಹಾಗು ಮಾಧ್ಯಮಿಕ ಶಾಲೆಯೊಂದನ್ನು ತೆರೆದರು. ಸುಮಾರು ೨೦ ವರುಷಗಳ ನಂತರ ಚಿಟಗುಪ್ಪದಲ್ಲಿ ಮಿಷನ್ ಶಾಲೆಯೊಂದು ಆರಂಭವಾಯಿತು. ಅಡತ್ ಬಜಾರ್ ವ್ಯವಹಾರವೆಲ್ಲ ಮೊಡೀ ಭಾಷೆಯಲ್ಲಿ ನಡೆಯುತ್ತಿತ್ತು. ೧೯೫೬ರ ಭಾಷಾವಾರು ಪ್ರಾಂತಗಳ ರಚನೆಯಾದ ಮೇಲೆ, ಕಲ್ಯಾಣ ಕರ್ನಾಟಕದಲ್ಲಿ ಅಲ್ಲಲ್ಲಿ ಪ್ರಾಥಮಿಕ ಶಾಲೆಗಳು ಉದಯವಾದವು. ಹುಮ್ನಾಬಾದ, ಹುಡಗಿ, ಖೇಣಿ ರಂಜೋಲ್, ಬೇಮಳಖೇಡಾ ಹೀಗೆ ಅಲ್ಲಲ್ಲಿ ಕಲಿಕಾ ಕೇಂದ್ರಗಳು ತಲೆಯೆತ್ತಿದವು. ಇನ್ನೂ ಬಹುತೇಕೆ ಹಳ್ಳಿಗಳಲ್ಲಿ ಶಾಲೆಗಳು ಇರಲೇ ಇಲ್ಲ. ಬೀದರ್ ಮತ್ತು ಚಿಟಗುಪ್ಪದಲ್ಲಿ ಹೈಸ್ಕೂಲ್ ಇತ್ತು. ಹುಮ್ನಾಬಾದನಲ್ಲಿ ಮಾಧ್ಯಮಿಕ ಶಾಲೆ ಇತ್ತು. ಆ ಕಾಲದಲ್ಲಿ  ಹತ್ತಾರು ಹಳ್ಳಿಗಳ ಕೇಂದ್ರದಲ್ಲಿ ಒಂದೊಂದು ಶಾಲೆ ಸ್ಥಾಪನೆಯಾಯಿತು.

೧೯೬೦ರಲ್ಲಿ, ಹೈದರಾಬಾದ್[ಕಲ್ಯಾಣ] ಕರ್ನಾಟಕದ ಹಳ್ಳಿಗಳಲ್ಲಿ ಕನ್ನಡ ಶಾಲೆಗಳು ಆರಂಭಗೊಂಡವು. ನಮ್ಮೂರಿಗೆ ಕಮಲನಗರ ವಿಭಾಗದ ಚಂದ್ರಪ್ಪ ಮಾಸ್ಟರ್ ಹೊಸದಾಗಿ ಬಂದರು. ನಮ್ಮೂರ ಶಾಲೆಯಲ್ಲಿ ನಮ್ಮದೇ ಮೊದಲನೆಯ ಬ್ಯಾಚ್. ಬೀದರ್ ಜಿಲ್ಲಾ ಕೇಂದ್ರದಲ್ಲಿ ಸರಕಾರಿ ಡಿಗ್ರಿ ಕಾಲೇಜು ಇರಲಿಲ್ಲ.  ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿ ಯಿಂದ ಸ್ಥಾಪಿತವಾದ ಒಂದು ಖಾಸಗಿ ಕಾಲೇಜು ಕಟ್ಟಡ (ಭೂಮರಡ್ಡಿ ಕಾಲೇಜು) ಮಾತ್ರ ಹೊಸದಾಗಿ ನಿರ್ಮಾಣ ಹಂತದಲ್ಲಿತ್ತು. 

ಬೀದರ್ ಪಟ್ಟಣದಲ್ಲಿ ಬ್ರಹತ್ ಗಾತ್ರದ ಎಂಜಿನ್ ಬಳಸಿ, ವಿದ್ಯುತ್ ತಯ್ಯಾರಿಸಿ ರಾತ್ರಿಯಲ್ಲಿ ಬೀದಿ ದೀಪ ಬೆಳಗಿಸುವ ವ್ಯವಸ್ಥೆ 'ಹೊಸ ಗಂಜ್' ನಲ್ಲಿ ಇತ್ತು. ಬೀದರ್ ಪಠಣಕ್ಕೆ ಇನ್ನೂ ವಿದ್ಯುತ್ ಸಂಪರ್ಕ ಇಲ್ಲದ ಕಾಲ ಅದಾಗಿತ್ತು.

1965- ಕೆರೋಸಿನ್ ಎಣ್ಣೆಯಿಂದ ನಡೆಯುವ  ಕಿರ್ಲೋಸ್ಕರ್ ಇಂಜಿನ್ ಬಳಸಿ, ಭಾವಿಯಿಂದ [ತೋಟಗಾರಿಕೆ] ಕೃಷಿಗೆ ನೀರು ಒದಗಿಸುವುದು ಆರಂಭಗೊಂಡಿತು. ಇದರಿಂದ ಎತ್ತುಗಳು ಬಳಸಿ ಭಾವಿಯಿಂದ ನೀರೆತ್ತುವುದು (ಮಟ್ಟಿ ಹೊಡಿಯುವುದು) ನಿಂತು ಹೋಯಿತು. ಇಂಜಿನ್ ಶಕ್ತಿ ಬಳಸುವ ಹಿಟ್ಟಿನ ಗಿರಣಿಗಳು ಆರಂಭವಾದವು. ಖೇಣಿ ರಂಜೋಲ್ ಊರಹೊರಗೆ ಹಿಟ್ಟು ಬೀಸುವ ಎಂತ್ರವಂದನ್ನು ಸ್ಥಾಪಿಸಿದರು.

1965-ರಾಷ್ಟ್ರೀಯ ಹೆದ್ದಾರಿ-9ರ ಮಂಗಲಗಿಯಿಂದ, ಖೇಣಿ ರಂಜೋಲ್ ಕಡೆ, [ಉಕ್ಕಿನಿಂದ ಮಾಡಿದ] ವಿದ್ಯುತ್ ಸರಬರಾಜು ಮಾಡುವ ಕಂಬಗಳು ನೆಡುವುದು ಆರಂಭಗೊಂಡಿತು. ಹಾಗು ಕೃಷಿ ಭೂಮಿಗೆ ನೀರುಣಿಸುವ ಪಂಪ್ ಸೆಟ್ ಗಳಿಗೆ ವಿದ್ಯುತ್ ಸರಬರಾಜು ಮಾಡಿದರು. ತದನಂತರ ಹುಮ್ನಾಬಾದ್ ನಿಂದ, ಮನ್ನಾಎಖೇಳ್ಳಿ ಕಡೆಗೆ 11kv ಶಕ್ತಿಯ ಪರ್ಯಾಯ ವಿದ್ಯುತ್ ಸರಬರಾಜು ಮಾಡುವ ಲೈನ್ ಎಳೆಯಲಾಯಿತು.

1966- ಮನೆಗಳಿಗೆ ವಿದ್ಯುತ್ ದೀಪಗಳು ಅಳವಡಿಸಿದ್ದು. ನಿಜಲಿಂಗಪ್ಪ ಎನ್ನುವ ಅಂದಿನ ಮುಖ್ಯ ಮಂತ್ರಿಗಳಿಂದ ಹಳ್ಳಿಖೇಡ ಸಕ್ಕರೆ ಕಾರ್ಖಾನೆಯ ಶಂಖು ಸ್ಥಾಪನೆಯಾಯಿತು. ಕಾರಂಜಾ ನದಿಗೆ ಹಳ್ಳಿಖೇಡ ಬ್ರಿಜ್ ಮತ್ತು ಬಗದಲ್ ಬ್ರಿಜ್ಗಳ ಕೆಲಸ ನಡೆದಿತ್ತು. ಇದಕ್ಕೆ ಮೊದಲು ಹುಮ್ನಾಬಾದ್ ನಿಂದ ಬೀದರ್ ಗೆ ಹೋಗಬೇಕಾದರೆ, ಜಾಹಿರಾಬಾದ್ ಮುಖಾಂತರ ಮಾತ್ರ ರಸ್ತೆ ಸಂಪರ್ಕ ಇತ್ತು. ಅಂದರೆ, ಹುಮ್ನಾಬಾದ್, ಜಾಹಿರಾಬಾದ್, ಮಾರ್ಗವಾಗಿ ಬೀದರಕ್ಕೆ ಹೋಗಬಹುದಾಗಿತ್ತು. ಈ ಸಮಯಕ್ಕೆ, ಹೈದರಾಬಾದನಿಂದ, ಮಹಾರಾಷ್ಟ್ರದ ಪರಳಿ-ವೈಜಿನಾಥ್ ವರೆಗೆ ಉಗಿಬಂಡಿ ರೈಲು ಓಡುವ ಸೇವೆಯು, ಬೀದರ್ ನಗರಕ್ಕೆ ಲಭ್ಯವಿತ್ತು.

೧೯೬೯ರಲ್ಲಿ ನನ್ನ ಜೊತೆ ಶಾಲೆ ಕಲಿತು ಮೆಟ್ರಿಕ್ ಪಾಸಾದ ಬಹುತೇಕ ಹುಡುಗರು, ಹಳ್ಳಿಖೇಡ ಸಕ್ಕರೆ ಕಾರ್ಖಾನೆಯ ಕಾರ್ಮಿಕರಾಗಿ ನೇಮಕಗೊಂಡರು.

1972ರ ಬರಗಾಲದಲ್ಲಿ, ಮಂಗಲಗಿಯಿಂದ ಖೇಣಿ-ರಂಜೋಲ್ ಕಡೆ ೨೨ ಅಡಿ ಅಗಲದ ರಸ್ತೆ ನಿರ್ಮಾಣ ಕೆಲಸದಲ್ಲಿ ನಾನು ಸಹ ಭಾಗವಹಿಸಿದ್ದು. ಈ ಕೆಲಸದಲ್ಲಿ ನಮ್ಮೂರಿನ ಹೇಮರೆಡ್ಡಿ ಧರ್ಮರೆಡ್ಡಿ ಎನ್ನುವವರು ಕಾಂಟ್ರ್ಯಾಕ್ಟರ್ ಆಗಿದ್ದರು. ೧೯೭೩ರಲ್ಲಿ ಬೀದರ್ ನಗರದಿಂದ ಬಗದಲ್-ಮನ್ನಾಎಖೇಳ್ಳಿ ಮಾರ್ಗವಾಗಿ, ಖೇಣಿ-ರಂಜೋಲ್ ಗೆ ಖಾಸಗಿ ಬಸ್ ಸೇವೆ ಲಭ್ಯವಿತ್ತು. ಖಾಸಗಿ ಬಸ್ಸಿನ ಹೆಸರು, "ಜೈ ಜವಾನ, ಜೈ ಕಿಸಾನ್" ಎಂದಿತ್ತು. ಹಳ್ಳಿಗಳಲ್ಲಿ ಜನ ಸೈಕಲ್ ಬಳಸುವುದು ಸರ್ವ ಸಾಮಾನ್ಯವಾಗಿತ್ತು. ಸಾಮಾನು ಸಾಗಿಸಲು ಎತ್ತಿನಬಂಡಿ, ಒಂಟೆ, ಮತ್ತು ಕತ್ತೆಗಳು  ಬಳಕೆಯಲ್ಲಿದ್ದವು.

೧೯೭೩ರಲ್ಲಿ ನಾನು ವಿಜ್ಞಾನ ಪದವೀಧರನಾದೆ. ಆದರೆ ವಿಜ್ಞಾನ ಕಾಲೇಜಿನಲ್ಲಿ ಓದುವಾಗ "ಇಲೆಕ್ಟ್ರಾನಿಕ್ಸ್" ಎನ್ನುವ ಪದವೇ ಕೇಳಿರಲಿಲ್ಲ. ಈ ಭಾಗದಲ್ಲಿ ವೈಜ್ಞಾನಿಕ ಮಾಹಿತಿ ನಿಧಾನವಾಗಿ ಅಂಬೆಗಾಲಿನಿಂದ ಸಾಗಿತ್ತು. ಹಳ್ಳಿಗರಿಗೆ ಸಿಮೆಂಟ್ ಎಂದರೆ ಏನೆಂದು ತಿಳಿದಿರಲಿಲ್ಲ. ಜನ ಹಳ್ಳಿಯಿಂದ ಪಟ್ಟಣಕ್ಕೆ ಹೋಗಲು ಹೆದರುತ್ತಿದ್ದರು.

ಈ ಕಾಲಕ್ಕೆ ಆಗಲೇ ಅಮೆರಿಕನ್ನರು, ೧೯೬೯ರಲ್ಲಿಯೇ ಚಂದ್ರನ ಮೇಲೆ ಕಾಲಿಟ್ಟು ತಿರುಗಿ ಭೂಮಿಗೆ ಬಂದಿದ್ದರು. ಅವರು ೧೯೪೫ರಲ್ಲಿಯೇ ಪರಮಾಣು ಬಾಂಬ್ ಹೊಂದಿದ್ದರು. ಅವರನ್ನು ಜಗತ್ತಿನ ದೊಡ್ಡಣ್ಣ ಎನ್ನುವ ಬಿರುದು. ಅಮೆರಿಕನ್ನರು ಎರಡನೆಯ ಮಹಾ ಯುದ್ಧದಲ್ಲಿ ಬಾಂಬ್ ಬಳಸಿ, ಜಪಾನ ದೇಶವನ್ನು ಸದೆಬಡಿದಿ ದ್ದರು.

---------------------------------------------------------------------------------------------

೧೯೬೦ರಲ್ಲಿ ನಮ್ಮೂರಿಗೆ ಹೊಸದಾಗಿ ನೇಮಕಗೊಂಡ, ಚಂದ್ರಪ್ಪ ಮಾಸ್ಟರ್ ಬಂದರು. ಈ ಹೊಸ ಶಾಲೆಯಲ್ಲಿ ನಮ್ಮದೇ ಮೊದಲನೆಯ ಬ್ಯಾಚ್ ಆಗಿತ್ತು. ತದನಂತರ, ನೆರೆಯ ಖೇಣಿ-ರಂಜೋಲ್ ಎನ್ನುವ ಊರಲ್ಲಿ ನಾನು ಪ್ರೌಢ ಶಾಲೆಯಲ್ಲಿ ಹತ್ತನೆಯ ವರೆಗೆ ಅಭ್ಯಾಸ ಮಾಡಿ, ೧೯೬೮-೬೯ರಲ್ಲಿ ಮೆಟ್ರಿಕ್ ಪರೀಕ್ಷಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದೆ. ಮೂರನೆಯ ಇಯತ್ತೆಯಿಂದಲೇ ನನ್ನ ತರಗತಿಗೆ ನಾನು ಕಲಿಕೆಯಲ್ಲಿ ಪ್ರಥಮ ವಿದ್ಯಾರ್ಥಿ ಇದ್ದೆ.

ಬಡತನದ ಸಂಕಷ್ಟದಲ್ಲಿ ಬಳಲಿದರೂ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೀದರಿನ ಭೂಮರಡ್ಡಿ ವಿಜ್ಞಾನ ಕಾಲೇಜಿನಲ್ಲಿ ಪ್ರವೇಶ ಪಡೆದು ೧೯೭೩ರಲ್ಲಿ ವಿಜ್ಞಾನ ಪದವೀಧರನಾದೆ. ಗಣಿತ ಮತ್ತು ಭೌತಶಾಸ್ತ್ರಗಳು ನನ್ನ ಐಚಿಕ ವಿಶಯಗಳಾಗಿದ್ದವು. ಆಗ ನಮ್ಮೂರಲ್ಲಿ ಪದವಿ ಗಳಿಸಿದವರು, ಇಬ್ಬರು ಮಾತ್ರ. ಅಲ್ಗೊಲ್ ಶಂಕರ್ ರೆಡ್ಡಿ ಮತ್ತು ನಾನು. ಈ ಭಾಗದಲ್ಲಿ ವಿದ್ಯಾವಂತರ ಅಭಾವ ಇದ್ದುದರಿಂದ ನಮಗೆ ಬೇಗನೆ ಸರಕಾರಿ ಕೆಲಸ ಲಭ್ಯವಾಯಿತು.

ತುಕಾರಾಮ ತಂದೆ ಗುಂಡಪ್ಪ ಕುಂಬಾರ ಹೊಸಕನಳ್ಳಿ:

ಕುಂಬಾರ ಮನೆಯಲ್ಲಿ ಹಳ್ಳಿಯಲ್ಲಿ ಹುಟ್ಟಿದ ಹುಡುಗ. ನೆರೆಯ ಹಳ್ಳಿಯಲ್ಲಿ ಶಾಲೆ ಕಲಿತೆ. NTMS ರಂಜೇರಿಯಲ್ಲಿ ೩ನೇಯ ತರಗತಿಯಿಂದ ೭ನೇಯ ತರಗತಿಯ ವರೆಗೆ ಮೆರಿಟ್ ನಲ್ಲಿ, ನನ್ನ ತರಗತಿಗೆ ನಾನೇ ಮೊದಲಿಗನಾಗಿ ಇರುತ್ತಿದ್ದೆ. ಗಣಿತ ನನ್ನ ನೆಚ್ಚಿನ ವಿಷಯವಾಗಿತ್ತು. ಗುರುಬಸಪ್ಪ-ಬಬ್ಚಡಿ ಎನ್ನುವ ಗಣಿತ ಶಿಕ್ಷಕರಿಂದ ಪ್ರಭಾವಿತನಾಗಿದ್ದೆ. ೭ನೇಯ ಬೋರ್ಡ ಪರಿಕ್ಷೆಯಲ್ಲಿ ಗಣಿತದಲ್ಲಿ, ಯಾವ ವಿಶೇಷ ತರಬೇತಿ ಇಲ್ಲದೆ ೯೦% ಗುಣಗಳನ್ನು ಗಳಿಸಿದೆ. ವಿಜ್ಞಾನದಲ್ಲಿ ಅತೀ ಕಡಿಮೆ ಗುಣಗಳು ಬಂದವು, ಕೇವಲ ೪೩% ಮಾತ್ರ. ದಿನಾಲೂ ತಪ್ಪದೆ ಶಾಲೆಗೆ ಹೋಗುತ್ತಿದ್ದೆ.

ನಮ್ಮೂರು:

      ಶಾರದಮ್ಮನ ದಿಬ್ಬದ ಆಚೇ ಈಚೇ ಎರಡು ಊರುಗಳಿದ್ದವು. ನಂಜುಂಡೇಶ್ವರಿ ದೊಡ್ಡ ಊರಾದರೆ, ಹ್ವಾಸಕನಲ್ಲಿ ಸಣ್ಣ ಹಳ್ಳಿ. ಕಾರಂಜಾ ನದಿಯ ತೀರದಲ್ಲಿ ಈ ಹಳ್ಳಿಗಳಿದ್ದವು.  ಸಿಂದೋಲ್, ಪಾತರಪಳ್ಳಿ, ವಗದಾಳ, ರೇಕುಳಗಿ, ಹ್ವಾಸಕನಲ್ಲಿ, ಹಜ್ಜರಗಿ, ಡಾಕುಳಗಿ, ಮತ್ತು ಸಂಗೊಳಗಿ ಅಂತ ಹೀಗೆ ಕಾರಂಜಾ ನದಿಗುಂಟಾ ಊರುಗಳು ಇದ್ದವು. ಈ ನದಿಗೆ ನಾಗರ-ಹಳ್ಳ ಮತ್ತು ಮರಕಲ್-ಹಳ್ಳ ಬಂದು ಸಂಧಿಸುವ ಸ್ಥಳದಲ್ಲಿ ನಂಜುಂಡೇಶ್ವರಿ ಎನ್ನುವ ದೊಡ್ಡ ಊರೊಂದಿತ್ತು. ಈ ಊರನ್ನು ಕಾಲಾಂತರದಲ್ಲಿ ನಂಜೇರಿ ಅಂತ ಕರೆಯಲಾಯಿತು. ಆಮೇಲೆ ರಂಜೇರಿ ಅಂತ ರೂಪಾಂತರ ಹೊಂದಿತು. ಈಗ ಅದೇ ಊರು ಖೇಣಿ-ರಂಜೋಲ್ ಅಂತ ಬದಲಾಗಿದೆ. ಹ್ವಾಸಕನಲ್ಲಿ, ಈಗ ಹೊಚಕನಲ್ಲಿ ಅಂತ ಬದಲಾಗಿದೆ. ಅಂದಿನ ಕಾಲದ ಹ್ವಾಸಕನಲ್ಲಿ, ೧೨ನೇಯ ಶತಮಾನದಲ್ಲಿ ಸಣ್ಣ ಊರಾಗಿತ್ತು.

          ಹ್ವಾಸಕನಳ್ಳಿಯಲ್ಲಿ, ಕೆಳಗಿನ ಮಳಾ, ಗೌಡರ ಮಳಾ, ಮೂಲಗ್ಯಾನ ಮಳಾ, ಅರಳಿ-ಗಿಡದ ಮಳಾ, ಹಾರೂರ ಮಳಾ, ಅಂತ ತೋಟಗಳಿದ್ದವು. ಊರಾಗ ಹಾರೂರ ಮನಿ, ಗೌಡರ ಮನಿ, ವಿರೂಪಾಕ್ಷೇಪ್ಪನ ಮನಿ, ಪೊಲೀಸ್ ಗೌಡರ ಮನಿ ಅಂತ ಇದ್ದವು. ಊರಾಗ ಮಹಾದೇವನ ಗುಡಿಯು, ಗೌಡರ ಮನಿ ಹತ್ತಿರ ಇತ್ತು. ಗೌಡರ ಮನಿಯ ಹೊರಬಾಗಿಲು ಉತ್ತರಕ್ಕ ಇತ್ತು. ಅಗಸಿ ಹತ್ತಿರ ಮೂಲಗ್ಯಾನ ಮನಿ ಇತ್ತು. ಅದರ ಎದುರಿಗೆ ಒಂದು ಚಿಕ್ಕ ಮಠ ಇತ್ತು. ಮಠದಲ್ಲಿ ಪ್ರಯಾಣಿಕರು ತಂಗುವ ವ್ಯೆವಸ್ಥೆ ಇತ್ತು. ಊರಾಗ ಮಠಪತಿಗಳು ಇದ್ದರು, ಹಾರೂರು ಇದ್ದರು. ಹೀಗೆ ಎಲ್ಲವೂ ಹಿಂದೂ ಸಂಸ್ಕೃತಿಯ ರೂಪದಲ್ಲಿ ಇತ್ತು.


ನಮ್ಮೂರು ಹೀಗಿತ್ತು

ತುಂಬಿದ ಬನ,  ನಿಶಬ್ದ ಸಂಜೆ, ಹಸಿರು ಹೊತ್ತ ಧರೆ, ಸುಘಂಧ ಬೀರುವ ಫಲ-ಪುಷ್ಪಗಳು, ತಂಗಾಳಿ, ಕಲ್ಮಶವಿಲ್ಲದ ವಾತಾವರಣ, ತಣ್ಣನೆಯ ಸಂಜೆಯ ಬಿಸಿಲು, ಅಲ್ಲಲ್ಲಿ ಕೆಲಸ ಮಾಡಲು ಹೋಗಿಬರುವವರ ಸಂಭ್ರಮ, ಸೀಮಿತ ಜನ, ನಿಂತು ಹೋಗಿರುವಂತೆ  ಕಾಣುವ ಚಟುವಟಿಕೆ, ಅಲ್ಲಲ್ಲಿ ಬೆಳೆದು ನಿಂತ ಪೈರುಗಳು.

ಸಣ್ಣ ಸರಳ ಮನೆಗಳು, ಸಾಕು ಪ್ರಾಣಿಗಳು, ಗಿಡಗಳ ಅಶ್ರೇಯದಲ್ಲಿ ಜನ, ಹುಡುಗರ ಆಟ, ಚೆಂಡಿನಾಟ, ಗೋಲಿಯಾಟ, ಗಿಲ್ಲಿಯಾಟ, ಇತ್ಯಾದಿಗಳು. ಊರಲ್ಲೆಲ್ಲಾ ಗಿಡಗಳೇ ಗಿಡಗಳು. ಊರ ಹೊರಗೂ ಗಿಡಗಳು. ವನಸ್ತೋಮ ಎತ್ತಿದ ಕೈ. ಜನರಿಗೆ ಒಂದೂರಿಂದ ಇನ್ನೊಂದೂರಿಗೆ ಹೋಗಬೇಕಾದರೆ ಕಾಲುದಾರಿ, ಕಣಿವೆದಾರಿಗಳು. ಭಯಹುಟ್ಟಿಸುವ ವನಗಳು. ಹೀಗಿತ್ತು ನಮ್ಮ ಬೀದರ್ ಜನಪದ ನಾಡು, ೧೯೬೦ರಲ್ಲಿ.

ಊರಿಂದ ಹೊರಗೆ ಸುಮಾರು ಸಾವಿರ ಅಡಿಗಳಷ್ಟು ದೂರದ ವರೆಗೆ ಒಣ ಭೂಮಿ. ಬಯಲು ಭೂಮಿ. ಅಲ್ಲಿ ಎಲ್ಲ ಮಕ್ಕಳು ಓಡಾಡುವ ಅವಕಾಶ. ಊರ ದನಕರುಗಳು ಈ ಸ್ಥಳದಲ್ಲಿ ಬಿಡಾರ ಹೂಡಬಹುದಾಗಿತ್ತು. ವಿರಳ ಜನವಸತಿ. ಅತಿ ಕಡಿಮೆ ಭಾವಿಗಳು. ಒಣ ಭೂಮಿಯೇ ಹೆಚ್ಚಿನದು. ಸಂಜೆಯಾಯಿತೆಂದರೆ ತೆರೆದ ಮನೆಗಳು ಮಸುಕು ದೀಪಕಾಣುವಂತೆ ನಿಶಬ್ದವಾಗುತ್ತಿದ್ದವು. ಸಂಭ್ರಮದಿಂದ ಆಚರಿಸುವ ಹಬ್ಬಗಳು. ಎಲ್ಲಾ ಹಬ್ಬಗಳನ್ನು ಆಚರಿಸುವ ಈ ಜನ ಅಲ್ಲಾನ ಭಕ್ತರು, ರಾಮನ ಭಕ್ತರು ಆಗಿದ್ದರು.ಇವರು ಮುಗ್ಧ ಜನ.  ಬಿಚ್ಚು ಮನಸ್ಸಿನ ಸರಳ ಜನ. ಒಳಗು, ಹೊರಗೂ ಒಂದೇ ಅನ್ನುವಂತೆ ಸಹಕಾರದಿಂದ ಕೂಡಿದ ಜೀವನ.

ನಮ್ಮದು ಕೃಷಿ ಪ್ರಧಾನ ಚಟುವಟಿಕೆಯ ಹಳ್ಳಿ. ವಕ್ಕಲುತನ ಜನರ ಮುಖ್ಯ ಕಸಬು. ಎಲ್ಲರ ಮನೆಯಲ್ಲಿ ದನ ಕರುಗಳು ಸಾಕುವರು.  ಊರಲ್ಲಿ ಶಾಲೆ ಇರಲಿಲ್ಲ. ಹೆಂಗಸರು ದಿನಾಲೂ ಮನೆಯಲ್ಲಿಯೇ ಜೋಳದ ಹಿಟ್ಟು ಬೀಸುವುದು ರೂಢಿ. ಒಕ್ಕಲಿಗರು ಬೆಳಗಾಗುವ ಮುನ್ನ ನಸುಕಿನ ಜಾವದಲ್ಲಿ ಎತ್ತುಗಳನ್ನು ಮೇಯಿಸಲು ಬಿಡುವರು. ಎತ್ತುಗಳು ದಾರಿಯಲ್ಲಿ ಸಾಗುವಾಗ ಅವುಗಳು ಕೊರಳ ಗಂಟೆಯ ಇಂಪಾದ ನಾದ ಕೇಳಿಸುವುದು.

ಊರಲ್ಲಿ ಒಬ್ಬನು ಮಾತ್ರ ಒಂದು ಸೈಕಲ್ ಹೊಂದಿದ್ದ. ಸಾಮಾನು ಮತ್ತು ಧಾನ್ಯಗಳನ್ನು ಸಾಗಿಸಲು ಎತ್ತಿನ ಗಾಡಿ ಅಥವಾ ಕತ್ತೆಗಳನ್ನು ಬಳಸುವರು. ಊರ ಗೌಡರು ಕುದುರೆ ಸವಾರಿ ಮಾಡುವರು. ತೊಗಲಿನ ಬಕ್ಕುಣ ಬಳಸಿ ಮಾಡುವ  ಏತನೀರಾವರಿ ಪದ್ಧತಿ ಇತ್ತು. ತೋಟದ ಭಾವಿಯಿಂದ ನೀರೆತ್ತಲು (ಮಟ್ಟಿ ಹೊಡೆಯಲು) ನಾಲ್ಕು ಎತ್ತುಗಳು ಬಳಸುವರು.

ಹೆಚ್ಚಿನವು ಚಪ್ಪರ ಮನೆಗಳು. ಮನೆಗಳ ಹಿಂದೆ ಮುಂದೆ ಹಿತ್ತಲ ಅಂಗಳ ಇರುತ್ತಿತ್ತು. ಮನೆಯಿಂದ ಮನೆಗೆ ಸಾಕಷ್ಟು ಬಿಡಿಜಾಗ  ಇರುತ್ತಿತ್ತು. ಮನೆಯ ಮುಂದೆ ಬೇವಿನ ಮರ ನೆಟ್ಟು ಅದಕ್ಕೊಂದು ಕಟ್ಟೆ  ಕಟ್ಟುವ ರೂಢಿ. ಮನೆಯಲ್ಲಿ ಸಂಜೆಗೆ ಚಿಮಣೀ ಎಣ್ಣೆ ದೀಪ ಹಚ್ಚುವರು. ಅಡುಗೆಗೆ ಕುಳ್ಳು ಕೆಟ್ಟಿಗೆ ಬಳಕೆ ಇತ್ತು. ಓಣಿಯಲ್ಲಿ ನೀರು ಸೇದುವ ಭಾವಿ ಇರುತ್ತಿತ್ತು. ಮನೆ ಸಾಮಾನು ಕೊಳ್ಳಲು ಊರಲ್ಲಿ ಎರಡು ಅಂಗಡಿಗಳಿದ್ದವು. ಊರ ಮುಂದೆ ಸಾಮೂಹಿಕ ಹರಟೆ ಹಾಗು ಮಕ್ಕಳ ಆಟಕ್ಕಾಗಿ ಕಟ್ಟೆಯನ್ನು ಕಟ್ಟುವರು. ಅದರಲ್ಲೊಂದು ಬೇವಿನ ಮರ ನೆಟ್ಟು ಅದರ ನೆರಳಿನಲ್ಲಿ ಕುಳಿತು ಜನ ಹರಟೆ ಹೊಡೆಯುವರು.

ನನ್ನ ಶಿಕ್ಷಣ ಮತ್ತು ಸೇವೆ

೧೯೬೯ರಲ್ಲಿ, ನಮ್ಮೂರಿನಿಂದ ಒಂದು ಕಿಲೋಮೀಟರ್ ದೂರದ, ಖೇಣಿ ರಂಜೋಳನಲ್ಲಿ ಶಾಲೆ ಕಲಿತು, ಮೆಟ್ರಿಕ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದೆ. ಪ್ರೌಢ ಶಾಲೆಯಲ್ಲಿ ಕಲಿಯುವಾಗ ತಂದೆ ಆತ್ಮಹತ್ಯಗೆ ಶರಣಾದರು. ಈ ಕಾರಣ ಮೆಟ್ರಿಕ್ ಪರಿಕ್ಷೆ ಮುಗಿದೊಡನೆ, ಸೋದರಮಾವಂದಿರು ಮತ್ತು ಅಮ್ಮ ಸೇರಿ ನನ್ನ ಬಾಲ್ಯ ವಿವಾಹ ಮಾಡಿದರು. ಮದುವೆಯಲ್ಲಿ ಕೊಟ್ಟ ಬಂಗಾರದ ಉಂಗುರ ಮಾರಿ, ಬೀದರ ನಗರದಲ್ಲಿ ವಿಜ್ಞಾನ ಪದವಿಗಾಗಿ ಅಧ್ಯಯನ ಆರಂಭಿಸಿದೆ. ಸರಕಾರದಿಂದ ಸಾಲದ ರೂಪದಲ್ಲಿ ವಿದ್ಯಾರ್ಥಿ ವೇತನ ಪಡೆದು 1973 ರಲ್ಲಿ [ದ್ವಿತೀಯ ದರ್ಜೆಯಲ್ಲಿ] ಬಿ.ಎಸ್. ಸಿ. ಪದವಿ ಪಡೆದೆ. ಪದವಿಗಾಗಿ ಗಣಿತ ಮತ್ತು ಭೌತವಿಜ್ಞಾನ ಆರಿಸಿಕೊಂಡಿದ್ದೆ.

1974 ರಲ್ಲಿ ಕೇಂದ್ರ ಸರಕಾರದ ಅಂಚೆ ಮತ್ತು ತಂತಿ ವಿಭಾಗದಲ್ಲಿ, ಟೆಲಿಫೋನ್ ಆಪರೇಟರ್ ಹುದ್ದೆಗೆ ಸೇರಿದೆ. 1979 ರಲ್ಲಿ, ಇಲಾಖೆಯ ಸ್ಪರ್ಧಾತ್ಮಕ ಪರಿಕ್ಷೆ ಬರೆದು ಫೋನ್ ಇನ್ಸ್ಪೆಕ್ಟರ್ ಹುದ್ದೆಗೆ ಬಡತಿ ಪಡೆದೆ. ಪುನಃ 1982 ರಲ್ಲಿ ಇನ್ನೊಂದು  ಸ್ಪರ್ಧಾತ್ಮಕ ಪರಿಕ್ಷೆ ಬರೆದು, ಜೂನಿಯರ್ ಇಂಜಿನಿಯರ್ ಹುದ್ದೆಗೆ ಬಡತಿ ಪಡೆದೆ.

1999 ರಲ್ಲಿ ಸೇವೆಯ ಹಿರಿತನದ ಆಧಾರವಾಗಿ, ಸಬ್-ಡಿವಿಜಿನಲ್-ಇಂಜಿನಿಯರ್ ಹುದ್ದೆಗೆ ಬಡತಿ ಪಡೆದೆ. ಅಧಿಕಾರಿಯಾಗಿ ಒಂದು ದಶಕದ ಸೇವೆಯ ನಂತರ, ನನ್ನ 58 ನೇ ವಯಸ್ಸಿಗೆ ಕೆಲಸದಿಂದ ನಿವೃತ್ತಿ ಪಡೆದೆ.


ದೂರವಾಣಿ ವಿನಿಮಯ ಕೇಂದ್ರ:

೧೯೭೪ರಲ್ಲಿ ನಾನು  ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಟೆಲಿಫೋನ್ ಆಪರೇಟರ್ ಆಗಿ ನೇಮಕಗೊಂಡೆ. ಭಾಲ್ಕಿ ಪಟ್ಟಣದಲ್ಲಿ ಸಣ್ಣ ಟೆಲಿಫೋನ್ ಆಫೀಸ್ ಇತ್ತು. ಈ ಊರಲ್ಲಿ ಕೇವಲ ೭೦ ಟೆಲಿಫೋನುಗಳು ಸೇವೆಯಲ್ಲಿದ್ದವು. ಇದಲ್ಲದೆ ಔರಾದ್ ಮತ್ತು ಕಮಲನಗರದ ಆಟೋ ಎಕ್ಸ್ಚೇಂಜ್ ಗಳು ಸಹ ಭಾಲ್ಕಿಯಿಂದಲೇ ಸಂಪರ್ಕ ಹೊಂದಿದ್ದವು. ಕೆಲವು ದೊಡ್ಡ ಹಳ್ಳಿಗಳು ಪಬ್ಲಿಕ್ ಕಾಲ್ ಆಫೀಸ್ [pco] ಸೇವೆ ಹೊಂದಿದ್ದವು. ಈ ಎಲ್ಲ ಟೆಲಿಫೋನ್ ಜಾಲದ ಸಂಪರ್ಕ ಕಲ್ಪಿಸುವ ಜವಾಬ್ದಾರಿ ನಿಭಾಯಿಸಲು ದಿನಕ್ಕೆ ನಾಲ್ಕು ಜನ ಆಪರೇಟರ್ ಗಳು ಕೆಲಸ ಮಾಡುತ್ತಿದ್ದರು. ಹೊರಗಿನ ಕರೆಗಳಿಗೆ ಸಂಪರ್ಕ ಕಲ್ಪಿಸಲು ಭಾಲ್ಕಿ-ಬೀದರ್ ಟ್ರಂಕ್ ಲೈನ್ ವ್ಯವಸ್ಥೆ ಇತ್ತು. ಆಪರೇಟರ್ ಗಳ ಕರಸೇವೆಯಿಂದ ಟೆಲಿಫೋನ್ ಕಾಲ್ ಸಂಪರ್ಕ ಕಲ್ಪಿಸಲಾಗುತ್ತಿತ್ತು.

ಟೆಲಿಫೋನ್ ಆಫೀಸಿನಿಂದ, ಟೆಲಿಫೋನ್ ಕಂಬಗಳ ಮೇಲೆ ಅಳವಡಿಸಲಾದ ಇನ್ಸುಲೇಟರ್ ಗಳ ಮೇಲೆ ಜೋಡಿ ವಾಹಕ ತಂತಿಗಳನ್ನು ಗ್ರಾಹಕರ ಮನೆ ಅಥವಾ ಅಂಗಡಿಗಳಿಗೆ ಎಳೆಯಲಾಗುತ್ತಿತ್ತು. ಇದನ್ನು ಲೋಕಲ್ ಲೈನ್ ಲೂಪ್ ಎನ್ನುತ್ತಿದ್ದರು. ಪ್ರತಿ ಗ್ರಾಹಕರಿಗೆ ಬೇರೆ ಬೇರೆ ಲೂಪ್ ಲೈನ್ ಇರುತ್ತಿತ್ತು. ಲೂಪ್ ಲೈನ್ ಕೊನೆಯಲ್ಲಿ ಫೋನ್ ಪೆಟ್ಟಿಗೆ ಅಳವಡಿಸುತ್ತಿದ್ದರು. ಗ್ರಾಹಕರು ಈ ದೂರವಾಣಿ ವ್ಯವಸ್ಥೆಗೆ ತಿಂಗಳ ಬಾಡಿಗೆ  ಕಟ್ಟಬೇಕಾಗಿತ್ತು. ಅನ್ಯ ಊರಿಗೆ ಮಾತಾಡಿದರೆ ಅದಕ್ಕೆ ಬೇರೆ ಹಣ ಕಟ್ಟಬೇಕಾಗುತ್ತಿತ್ತು. ಎರಡು ತಿಂಗಳಿಗೆ ಒಮ್ಮೆ ಬಿಲ್ಲು ಬರುತ್ತಿತ್ತು. ನಿಗದಿತ ಸಮಯದಲ್ಲಿ ಬಿಲ್ಲು ಕಟ್ಟದಿದ್ದಲ್ಲಿ ಟೆಲಿಫೋನ್ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿತ್ತು.

ತಾಂತ್ರಿಕ ವ್ಯವಸ್ಥೆ ನಿಭಾಯಿಸಲು, ಒಬ್ಬ ಟೆಕನಿಸಿಯನ್ ಮತ್ತು ಮೂವರು ಲೈನ್ ಮ್ಯಾನ್ ಗಳು ಇದ್ದರು. ಸಾಮಾನ್ಯವಾಗಿ ಇತರೆ ತಾಲೂಕಾ ಸ್ಥಳಗಳಲ್ಲಿ ಸಹ ಇಂತಹದೇ ವ್ಯವಸ್ಥೆ ಇರುತ್ತಿತ್ತು. ಒಂದು ಜಿಲ್ಲೆಯ ಒಟ್ಟು ಜಾಲವನ್ನು ಸೆಕಂಡರಿ ಸ್ವಿಚಿಂಗ್ ಏರಿಯಾ ಎನ್ನುತ್ತಿದ್ದರು. ಕಲಬುರಗಿಯು ಡಿವಿಜಿನಲ್ ಟೆಲಿಫೋನ್ ಕೇಂದ್ರವಾಗಿತ್ತು. ಕಲಬುರಗಿಯಲ್ಲಿ ೭೦೦ ಟೆಲಿಫೋನುಗಳು ಇದ್ದವು. ಬೀದರಿನಲ್ಲಿ ೩೦೦ ಟೆಲಿಫೋನುಗಳಿದ್ದವು. ಇದನ್ನು ಮಾನ್ಯುಯಲ್ ಟೆಲಿಫೋನಿ ಎನ್ನುತ್ತಿದ್ದರು. ಆಪರೇಟರುಗಳೇ ಯಂತ್ರಗಳಂತೆ ಸಂಪರ್ಕ ಕಲ್ಪಿಸಿಕೊಡುವ ತಂತ್ರಗಾರಿಕೆ ಇದಾಗಿತ್ತು. ಒಬ್ಬ ಆಪರೇಟರ್ ದಿನಕ್ಕೆ ೮ ತಾಸು ಕೆಲಸ ಮಾಡಬೇಕಾಗಿತ್ತು.

ಬಹಳಷ್ಟು ಹಳ್ಳಿಯ ಜನರಿಗೆ ಟೆಲಿಫೋನ್ ಸೇವೆಯ ಅರಿವೇ ಇಲ್ಲದ ಕಾಲ ಅದಾಗಿತ್ತು. ಹೆಚ್ಚಿನ ಫೋನುಗಳು ವ್ಯಾಪಾರಕ್ಕಾಗಿ ಬಳಕೆಯಾಗುತ್ತಿದ್ದವು. ಮುಂದಿನ ದಶಕಗಳಲ್ಲಿ ಟೆಲಿಫೋನ್ ಸೇವೆಯಲ್ಲಿ ಗಣನೀಯವಾದ ಪ್ರಗತಿ ಕಂಡುಬಂತು. ೧೯೯೦ರ ದಶಕದಲ್ಲಿ ಎಸ.ಟಿ.ಡಿ. ಸೌಲಭ್ಯ ಆರಂಭವಾಯಿತು. ಎಲೆಕ್ಟಾನಿಕ್ ಡಿಜಿಟಲ್ ಸ್ವಿಚ್ ಗಳು ದೇಶದಲ್ಲೇ ತಯ್ಯಾರಾಗುತ್ತಿದ್ದವು. ೧೯೮೬ರಲ್ಲಿ ಇಂತಹ ಮೊದಲ ಎಲೆಕ್ಟಾನಿಕ್ ಸ್ವಿಚಿಂಗ್ ಯಂತ್ರ ಒಂದನ್ನು ಕರ್ನಾಟಕದ ಕಿತ್ತೂರಿನಲ್ಲಿ ಅಳವಡಿಸಲಾಯಿತು. ದೂರದ ಪಟ್ಟಣಗಳಿಗೆ ಸೇವೆ ಸಲ್ಲಿಸಲು ಮೈಕ್ರೋವೆವ್ ಗೋಪುರಗಳು ತಲೆಯೆತ್ತಿದವು. ಭಾರತದಲ್ಲಿ ಟೆಲೆಫೋನ್ ವಿಸ್ತರಣೆ ರಭಸವಾಗಿ ನಡೆಯಿತು. ಕೊನೆಗೆ ಆಪ್ಟಿಕಲ್ ಕೇಬಲುಗಳ ಜಾಲ ಹುಟ್ಟಿಕೊಂಡು ಟೆಲಿಫೋನ್ ಸೇವೆಯಲ್ಲಿ ಸ್ಥಿರತೆ ಉಂಟಾಯಿತು. ೨೦೦೦ದ ದಶಕದಲ್ಲಿ ಮೊಬೈಲ್ ಟೆಲಿಫೋನ್ ವ್ಯವಸ್ಥೆ ಆರಂಭಗೊಡಿತು. ತಂತಿಯಿಲ್ಲದ ಫೋನ್ ಮಾತುಕತೆ ಸಹಜವಾಗಿ ನಡೆಯಿತು.

---------------------------------------------------------------------------------

ನಾನೊಬ್ಬ ವಿಜ್ಞಾನ ಹವ್ಯಾಸಿ.

1973ರಲ್ಲಿ ವಿಜ್ಞಾನ ಪದವಿ ಪಡೆದೆನಾದರೂ, ವಿಜ್ಞಾನ ಏನೆಂದು ಪೂರ್ಣ ಅರಿವಾಗಿರಲಿಲ್ಲ. 1994 ರಲ್ಲಿ ಜಿ.ಟಿ. ನಾರಾಯಣರಾಯರ 'ವೈಜ್ಞಾನಿಕ ಮನೋಧರ್ಮ ' ಎನ್ನುವ ಕೃತಿಯ ಅಧ್ಯಯನ ಮಾಡಿದಾಗ, ವಿಜ್ಞಾನ ಎಂದರೇನು, ಅನ್ನುವ ಪೂರ್ಣ ಅರಿವಾಯಿತು. ಎಲ್ಲ ಮೂಢನಂಬಿಕೆಗಳು ಕರಗಿ ಹೋದವು. ಅಂತರಂಗದಲ್ಲಿ ಹೊಸ ಹೊಸ ವಿಚಾರಗಳು ಹಾಗು ಪ್ರಶ್ನೆಗಳು ಉದಯವಾದವು. ವಿಜ್ಞಾನದ ದಾರಿಯಲ್ಲಿ ಮುಂದೆ ಮುಂದೆ ಸಾಗಿರುವೆ. ನನ್ನ ದಾರಿ ಕೇವಲ ಜ್ಞಾನ ದಾಹ ಮಾತ್ರ ಆಗಿತ್ತು.

ವಿಜ್ಞಾನದತ್ತ ನನ್ನ ಒಲವು:

೧೯೯೪ರಲ್ಲಿ ಒಮ್ಮೆ, ನಾನು ರಾಯಚೂರಿನಲ್ಲಿ ಸೇವೆಯಲ್ಲಿರುವಾಗ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಅಲ್ಲಿ  ಜಿ.ಟಿ. ನಾರಾಯಣರಾಯರಿಂದ ಕನ್ನಡದಲ್ಲಿ ಬರೆದ ವೈಜ್ಞಾನಿಕ ಮನೋಧರ್ಮ ಎನ್ನುವ ಪುಸ್ತಕ ಒಂದು ಕೊಂಡುಕೊಂಡೆ. ಆಗಾಗ್ಗೆ ಕೆಲಸದಿಂದ ಬಿಡುವಿದ್ದಾಗ ಪುಟಗಳನ್ನು ತಿರುವಿ ಅದನ್ನು ಓದುತ್ತಿದ್ದೆ. ನಾನು ಅರ್ಧ ಪುಸ್ತಕ ಓದಿದ ಮೇಲೆ, ನನಗೆ ಗಣಿತಕ್ಕೂ, ವಿಜ್ಞಾನಕ್ಕೂ ಇರುವ ನಿಕಟ ನಂಟಿನ ಅರಿವಾಯಿತು. ವಿಜ್ಞಾನದ ಸಮಸ್ಸೆ ಬಿಡಿಸಲು ಗಣಿತದ ಗುಟ್ಟು ರಟ್ಟಾಯಿತು.

ನನ್ನ ಕುತೂಹಲಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ:

'ಭೂಮಿಯಿಂದ ಎಷ್ಟು ಎತ್ತರದಲ್ಲಿ ಮೋಡಗಳು ಹುಟ್ಟಿಕೊಳ್ಳುತ್ತವೆ?' ಎನ್ನುವ ಪ್ರಶ್ನೆ ಕಾಡಿತು. ಅದನ್ನು ಬಿಡಿಸಿದೆ. ಸರಾಸರಿ ಉತ್ತರ 5 ರಿಂದ 6 ಕಿಲೋಮೀಟರ್ ಎತ್ತರದಲ್ಲಿಎಂದು ತಿಳಿಯಿತು. ಇದೇ ರೀತಿ, ಗಣಿತದ ಹಿಕಮತಿ ಬಳಸಿ ಸೂರ್ಯನ ವ್ಯಾಸದ ಉದ್ದ ಕಂಡುಹಿಡಿಯಲು ಒಂದು ಪ್ರಯೋಗದ ಆಧಾರವಾಗಿ ಪ್ರಯತ್ನಿಸಿದೆ. ಇದರಂತೆ ಸೂರ್ಯನ ಸುತ್ತ ಭೂಮಿಯ ಚಲನೆಯ ಸರಾಸರಿ ವೇಗ ಕಂಡುಹಿಡಿದೆ. ಅಂದರೆ ಸೂರ್ಯನ ಸುತ್ತ ಭೂಮಿಯ ಪರಿಭ್ರಮಣದ ಸರಾಸರಿ ವೇಗ ಲೆಕ್ಕಹಾಕಿದೆ. ಕುತೂಹಲಕ್ಕೆ ನನ್ನ ಉತ್ತರಗಳು, ಸರಿಯಾಗಿಯೇ ಇದ್ದವು. ಹೀಗೆ ವಿಜ್ಞಾನ ಪ್ರಪಂಚಕ್ಕೆ ನಾನು ಹತ್ತಿರವಾಗುತ್ತಾ ನಡೆದೆ. ಪದವಿಯಲ್ಲಿ ಓದುವಾಗ ರಸಾಯನ ಶಾಸ್ತ್ರ ಚೆನ್ನಾಗಿ ಅರ್ಥವಾಗಿರಲಿಲ್ಲ. ಮುಂದೊಮ್ಮೆ, ಸಸ್ಯಗಳು ಸೂರ್ಯನ ಬೆಳಕಿನಲ್ಲಿ ಸಕ್ಕರೆ ತಯ್ಯಾರಿಸುವ ಕ್ರಮ, ನನ್ನ ಕುತೂಹಲ ಕೆರಳಿಸಿತು. ಇದೇ ಧಾಟಿಯಲ್ಲಿ ಮುನ್ನುಗ್ಗಿ ರಸಾಯನ ಶಾಸ್ತ್ರದತ್ತ ನನ್ನ ಒಲವು ಹೆಚ್ಚಿತು. ವಿವಿಧ ಪರಮಾಣುಗಳ ಸಹವೇಲೆನ್ಸಿ ಬಂಧ ಉಂಟಾಗುವುದನ್ನ ಮತ್ತು ಇದಕ್ಕೆ ಸಂಭಂದಿಸಿದಂತೆ ಶಕ್ತಿಯಲ್ಲಿ ಆಗುವ ಬದಲಾವಣೆಗಳನ್ನು ಅರ್ಥಮಾಡಿಕೊಂಡೆ.

ಕಾಲದೊಂದಿಗೆ ರಸಾಯನ ಶಾಸ್ತ್ರದಲ್ಲಿ ಆದ ಬೆಳವಣಿಗೆಯ ಅಧ್ಯಯನ ಮಾಡಿದೆ. ಹೀಗೆ ನಾನೊಬ್ಬ ರಸಾಯನ ಶಾಸ್ತ್ರದ ಹವ್ಯಾಸಿಯಾದೆ. ಮೂಲಧಾತುಗಳ ಪರಮಾಣು ರಾಶಿಯನ್ನು ಆಧರಿಸಿ, ಸೈಬೀರಿಯಾದ ವಿಜ್ಞಾನಿ ಮೆಂಡೆಲಿವರು ಧಾತುಗಳ ಆವರ್ತಕ ಕೋಷ್ಟಕ ರಚನೆ ಮಾಡಿದನ್ನು ಅಭ್ಯಾಸ ಮಾಡಿದೆ. ಹೀಗೆ ವಿಜ್ಞಾನ ಲೋಕದಲ್ಲಿ ನನ್ನ ಪಯಣ ಮುಂದೆ ಮುಂದೆ ಸಾಗಿತು. ಆವರ್ತಕ ಕೋಷ್ಟಕ ಇಡೀ ವಿಶ್ವಕ್ಕೆ ಅನ್ವಯ ಎಂದು ತಿಳಿದಾಗ, ಬಲು ಆಶ್ಚರ್ಯ ಹಾಗು ಸಂತೋಷದ ಭಾವನೆ ಮೂಡಿತು.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭೋದನೆ:[2014]

ನಾನು ಶಿಕ್ಷಕನಾದದ್ದು ಒಂದು  ಆಕಸ್ಮಿಕ ಘಟನೆ. ಕೆಲಸದಿಂದ ನಿವೃತ್ತಿ ಪಡೆದಮೇಲೆ, ಒಮ್ಮೆ ನಾನು ಬೆಳಕೇರಿಯ ಬೆಟ್ಟದ ಮೇಲಿರುವ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಪೂಜೆ ಮತ್ತು ಪ್ರಾರ್ಥನೆಗಾಗಿ ಭೇಟಿ ನೀಡಿದ್ದೆ. ಪೂಜೆಯ ನಂತರ ನಾನು ಸರ್ಕಾರಿ ಶಾಲೆಯ ಬಳಿ ಹಾದು ಹೋಗುತ್ತಿದ್ದಾಗ, 10ನೇ ತರಗತಿಯ ವಿದ್ಯಾರ್ಥಿಗಳ ಧರಣಿಯನ್ನು ನೋಡಿದೆ. ಅವರು ತಮಗೆ ಪಾಠ ಕಲಿಸಲು ಗಣಿತ ಶಿಕ್ಷಕರ ಬೇಡಿಕೆ ಇಟ್ಟು  ಧರಣಿಗೆ ಇಳಿದಿದ್ದರು. ಶಾಲೆಯಲ್ಲಿ ಅವರಿಗೆ ಗಣಿತ ವಿಷಯ ಕಲಿಸಲು ಯಾರೂ ಇರಲಿಲ್ಲ.  ಇದನ್ನು ಕಂಡ ನಾನು, "ಸ್ವಲ್ಪ ಪ್ರಯತ್ನಿಸೋಣ" ಎಂದು ಯೋಚಿಸಿದೆ. ಮರುದಿನ, ನಾನು ಹೈಸ್ಕೂಲಿಗೆ ಹೋಗಿ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. "ತಾತ್ಕಾಲಿಕವಾಗಿ ಅಳಿಲು ಸೇವೆಯೇ  ಸರಿ" ಎಂದು, ಗಣಿತ ಪಾಠ ಮಾಡುತ್ತಿದ್ದೆ. ಹೈಸ್ಕೂಲ್ ಹುಡುಗರಿಗೆ ಗಣಿತ ತರಗತಿಗಳನ್ನು ತೆಗೆದುಕೊಳ್ಳಲು ಮುಖ್ಯೋಪಾಧ್ಯಾಯರು ನನಗೆ ಅವಕಾಶ ನೀಡಿದರು. ನಿಧಾನವಾಗಿ ನಾನು ಬೋಧನಾ ಪ್ರಕ್ರೀಯೆಯಲ್ಲಿ ತೊಡಗಿಸಿಕೊಂಡೆ ಮತ್ತು ನಂತರ ನಾನು ಶಾಲೆಯ ವೇಳಾಪಟ್ಟಿಯ ಪ್ರಕಾರ 8ನೇ, 9ನೇ ಮತ್ತು 10ನೇ ವಿದ್ಯಾರ್ಥಿಗಳಿಗೆ ನಿಯತವಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೆ. ಈ ಅಭ್ಯಾಸ ಸುಮಾರು ಎರಡು ವರ್ಷಗಳ ಕಾಲ ನಡೆಯಿತು. ನಾನು ವೃತ್ತಿಪರ ಶಿಕ್ಷಕನಾಗಿರಲಿಲ್ಲ ಮತ್ತು ಶಾಲೆಗಳಲ್ಲಿ ಕಲಿಸಲು ಯಾವುದೇ ತರಬೇತಿ ಪಡೆದಿರಲಿಲ್ಲ. ಆದರೂ,  ಮಕ್ಕಳಿಗೆ ಕಲಿಸಬೇಕೆನ್ನುವ ನನ್ನ ಉತ್ಸಾಹವು ಕೆಲಸ ಮಾಡಿತು ಮತ್ತು ನನ್ನನ್ನು ಹೈಸ್ಕೂಲ್ ಶಿಕ್ಷಕನನ್ನಾಗಿ ಮಾಡಿತು.

ಗಣಿತ ವಿಷಯದಲ್ಲಿ ಮೂಲಭೂತ ಕೌಶಲ್ಯಗಳನ್ನು ಕಲಿಯಲು ಕೆಲವು ವಿದ್ಯಾರ್ಥಿಗಳು ನನ್ನ ನಿವಾಸಕ್ಕೆ ಭೇಟಿ ನೀಡಲು ಪ್ರಾರಂಭಿಸಿದರು. ಜನರು ನನ್ನನ್ನು "ಶಿಕ್ಷಕರು" ಎಂದು ಕರೆಯಲು ಪ್ರಾರಂಭಿಸಿದರು. ಹೀಗಿರುವಾಗ, ಒಂದು ಒಳ್ಳೆಯ ದಿನ, ಸರಕಾರದಿಂದ ಗಣಿತ ಶಿಕ್ಷಕರನ್ನು ನೇಮಿಸಲಾಯಿತು ಮತ್ತು ನಾನು ಗಣಿತ ಬೋಧನೆಯಿಂದ ಮುಕ್ತನಾದೆ. ಆದರೆ ಈ ಮಧ್ಯ, ವಿಜ್ಞಾನ ಶಿಕ್ಷಕಿಯೊಬ್ಬರು ಗರ್ಭಿಣಿಯಾಗಿದ್ದು, ಆರು ತಿಂಗಳುಗಳ ಕಾಲ, ಹೆರಿಗೆ ರಜೆಯ ಮೇಲೆ ತೆರಳಿದರು. ವಿಜ್ಞಾನವು ನನ್ನ ಹವ್ಯಾಸವಾಗಿದ್ದರಿಂದ, ನಾನು ಮಕ್ಕಳಿಗೆ ವಿಜ್ಞಾನ ಕಲಿಸಲು ಪ್ರಾರಂಭಿಸಿದೆ. ಇದು 10ನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ SSLC ಫಲಿತಾಂಶ ಉತ್ತಮಗೊಳಿಸಲು ಸಹಾಯ ಮಾಡಿತು. ಯಾರೂ ನನ್ನನ್ನು ಶಿಕ್ಷಕರಾಗಿ ಕೆಲಸ ಮಾಡಲು ಕೇಳಿರಲಿಲ್ಲ, ಆದರೆ ನಾನು ಯಾವುದೇ ಸಂಬಳ ಅಥವಾ ಗೌರವ-ಧನವನ್ನು ಬಯಸದೆ, ಸ್ವಯಂಪ್ರೇರಿತನಾಗಿ ಇದೆಲ್ಲವನ್ನೂ ಮಾಡಿದೆ. ನಾನು ನನ್ನ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದೆ ಮತ್ತು ನನ್ನ ಆಹಾರದ ಅಗತ್ಯಗಳನ್ನು ಅಲ್ಲಿಯೇ ಪಡೆಯುತ್ತಿದ್ದೆ.

ಕಲಿಸುವಾಗ ನಾನೂ ಕಲಿಯುತ್ತಿದ್ದೆ. ನನಗೂ ಲಾಭವಾಯಿತು. ವಿಜ್ಞಾನ ಶಿಕ್ಷಕಿ ರಜೆ ಮುಗಿಸಿ ಹಿಂದಿರುಗಿದಾಗ ನಾವಿಬ್ಬರೂ ಬಯೋಕೆಮಿಸ್ಟ್ರಿ ಮತ್ತು ಭೌತಶಾಸ್ತ್ರದಂತಹ ಪರಸ್ಪರ ಆಸಕ್ತಿಯ ವಿಷಯಗಳನ್ನು ಚರ್ಚಿಸುತ್ತಿದ್ದೆವು. ಸುಮಾರು ನಾಲ್ಕು ವರ್ಷಗಳ ಕಾಲ, ನಾನು ಈ ಕೆಲಸದಲ್ಲಿದ್ದೆ. ಹೀಗೆ, ನಾನೂ ಕೂಡ ಶಿಕ್ಷಕನಾದೆ. ಕೆಲವೊಮ್ಮೆ ನಾನು ಇಂಗ್ಲಿಷ್ ವ್ಯಾಕರಣದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೆ. ಇಂಗ್ಲಿಷ್ ಶಿಕ್ಷಕರು ವ್ಯಾಕರಣ ಭೋದನೆಯನ್ನು ಮುಂದುವರಿಸಲು ನನ್ನನ್ನು ಪ್ರೋತ್ಸಾಹಿಸಿದರು. ಮಕ್ಕಳಿತೆ ಇಂಗ್ಲಿಷ್ ವ್ಯಾಕರಣ ಕಲಿಸುವ ನನ್ನ ಪ್ರಯತ್ನವನ್ನು ಅವರು ಶ್ಲಾಘಿಸಿದರು. ನನ್ನ ನಿವೃತ್ತ ಜೀವನದ ಸಮಯವು ಗ್ರಾಮೀಣ ಪರಿಸರದಲ್ಲಿ ಶಾಲೆ ಕಲಿಕೆ ಸೇವೆ ಸಲ್ಲಿಸಲು ಬಳಸಿಕೊಳ್ಳಲಾಯಿತು.

ಸೈನ್ಸ್ ಟೀಚರ್ ಪಿಎಚ್ ಡಿಗಾಗಿ ಓದುತ್ತಿದ್ದರು ಮತ್ತು ಆಕೆಗೆ ವಿಜ್ಞಾನದಲ್ಲಿ ನನ್ನ ಅನುಭವದ ಅಗತ್ಯವಿತ್ತು; ವಿಶೇಷವಾಗಿ ಎಲೆಕ್ಟ್ರಾನಿಕ್ಸ್, ಸಂವಹನ ಮತ್ತು ಸೌರಶಕ್ತಿಯಂತಹ ಅನ್ವಯಿಕ ವಿಜ್ಞಾನದಲ್ಲಿ. ನಾವು ಒಟ್ಟಿಗೆ ಕುಳಿತು ಓದುತ್ತಿದ್ದೆವು ಮತ್ತು ಸಂಬಂಧಿಸಿದ ವಿಷಯಗಳನ್ನು ಚರ್ಚಿಸುತ್ತಿದ್ದೆವು. ಅವಳು ರಸಾಯನಶಾಸ್ತ್ರದಲ್ಲಿ ತನ್ನ Ph.D ಯ ಸಿದ್ಧಾಂತದ ಭಾಗವನ್ನು  ಪಾಸಾದಾಗ, ತುಂಬಾ ಸಂತೋಷಪಟ್ಟಳು.

                                                                      -ಎಚ್. ಕೆ. ತುಕಾರಾಮ


ನನ್ನ ವಿದ್ಯಾಭ್ಯಾಸ ಮತ್ತು ಕೆಲಸ:

ಹುಟ್ಟಿದ್ದು ಹೊಸಕನಲ್ಲಿಯಲ್ಲಿ. ತಂದೆ ಗುಂಡಪ್ಪ ಗಡಿಗೆಮಾಡುವರು, ತಾಯಿ ತಿಪ್ಪಮ್ಮ ಮನೆಗೆಲಸ ನೋಡಿಕೊಳ್ಳುವರು. ನರಸಮ್ಮ ಅಜ್ಜಿ ಮನೆಯ ಹಿರಿಯರು. ನಾನು ಪ್ರಾಥಮಿಕ ಹಾಗು ಪ್ರೌಢ ಶಾಲೆಗೆ ಹೋಗಿದ್ದು ರಂಜೇರಿಯಲ್ಲಿ. ೧೯೬೦ರ ಸಮಯ; ಸುತ್ತು ಹತ್ತಾರು ಹಳ್ಳಿಗಳಿಗೆ ಒಂದೇ ಶಾಲೆ, ಅದು ರಂಜೇರಿಯಲ್ಲಿ. ಇದೇ ಊರಲ್ಲಿ ೧೯೬೭-೬೮ರಲ್ಲಿ ಪ್ರೌಢ ಶಾಲೆಯ ಆರಂಭ. ಈ ಶಾಲೆಯಲ್ಲಿ ನನ್ನದು ಎರಡನೇ ಬ್ಯಾಚ್ ಆಗಿತ್ತು.

ಖೇಣಿ ರಂಜೋಲ್ ಶಾಲೆಯಲ್ಲಿ ೩ರರಿಂದ ೭ನೇ ತರಗತಿಯ ವರೆಗೆ ಶಾಲೆ ಕಲಿತೆ. ನಮ್ಮೂರಿಂದ ನಮ್ಮ ಶಾಲೆ ಒಂದು ಕಿಲೋಮೀಟರ್ ದೂರದಲ್ಲಿತ್ತು. ದಿನಾಲು ತಪ್ಪದೆ ಶಾಲೆಗೆ ಹೋಗುತ್ತಿದ್ದೆ. ಗಣಿತ ನನ್ನ ಇಷ್ಟವಾದ ವಿಷಯವಾಗಿತ್ತು. ೭ನೇಯ ಬೋರ್ಡ್ ಪರಿಕ್ಷೆಯಲ್ಲಿ ಯಾವುದೇ ವಿಶೇಷ ತರಬೇತಿ ಇಲ್ಲದೆ ಗಣಿತದಲ್ಲಿ ೯೦% ಗುಣ ಗಳು ಗಳಿಸಿದೆ. ಮುಂದೆ ಜೂನ್ ೧೯೬೬ರಲ್ಲಿ ಹೊಸದಾಗಿ ತೆರೆಯಲಾದ ಟಿ.ಡಿ.ಬಿ. ಹೈಸ್ಕೂಲ್ ರಂಜೋಲ್ ನಲ್ಲಿ ಪ್ರವೇಶ ಪಡೆದೆ. ನನಗೆ ೫೦ ರೂಪಾಯಿ ಮೆರಿಟ್ ಸ್ಕಾಲರ್ಷಿಪ್ ಕೊಟ್ಟರು. ಒಂಬತ್ತನೆಯಲ್ಲಿ ವಿಶೇಷ ವಿಜ್ಞಾನ ವಿಭಾಗ ಆರಿಸಿಕೊಂಡು ಓದುತ್ತಿದ್ದೆ.

ದಸರಾ ಹಬ್ಬದ ದಿನಗಳಲ್ಲಿ ಅಪ್ಪ, ಇದ್ದಕಿದ್ದಂತೆ ಆತ್ಮಹತ್ತೆಗೆ ಶರಣಾದರು. ಅವರು ಒಂದು ಹೊಲ ಕೊಳ್ಳುವ ಪ್ರಕ್ರಿಯೆಯಲ್ಲಿ ಮೋಸ ಹೋಗಿದ್ದರು. ಅವರು ಜೀವನದುದ್ದಕೂ ಗಳಿಸಿದ ಹಣ ನಿರುಪಾಲಾಗಿತ್ತು. ಇದು ಆಘಾತ ಮತ್ತು ಆರ್ಥಿಕ ಸಂಕಟಕ್ಕೆ ಕಾರಣವಾಯಿತು. ಅಮ್ಮ ಕ್ಷೆಯದಿಂದ ಬಳಲುತ್ತಿದ್ದರು. ಹತ್ತನೆಯಲ್ಲಿ ಓದುವಾಗ ೨೫ ರೂಪಾಯಿ ಪರೀಕ್ಷೆ ಶುಲ್ಕ ಕಟ್ಟಲು ಒದ್ದಾಡಿ ಹೋದೆ. ಕೊನೆಗೆ ಬೆಳಕೇರಿಯ ಸೋದರತ್ತೆ, ಉಣ್ಣುವ ಜೋಳ ಮಾರಾಟಮಾಡಿ ೨೫ ರೂಪಾಯಿ ಕೊಟ್ಟರು.

ಮೆಟ್ರಿಕ್ ಪರೀಕ್ಷೆಗೆ ಮುನ್ನ ನನ್ನ ಮದುವೆಯ ವಿಷಯವಾಗಿ ಮಾತಾಡಲು ಶ್ರೀಮಂಡಲದ ನೆಂಟರು ಬಂದರು. ನಾನು ಇನ್ನೂ ಶಾಲೆ ಕಲಿಬೇಕು, ಎಂದು ಹೇಳಿದೆ. ಆದರೆ, ಅಮ್ಮ ನನ್ನ ಮದುವೆಗೆ ಸಮ್ಮತಿ ಕೊಟ್ಟರು. ಪರೀಕ್ಷೆ ಮುಗಿದೊಡನೆ ನನ್ನ ಸರಳ ಮದುವೆ, ವಧುವಿನ ಊರಲ್ಲಿ ಜರುಗಿತು. ನಾನು ಎಸ.ಎಸ.ಎಲ್.ಸಿ. ಯಲ್ಲಿ ೬೭% ಗುಣಗಳೊಂದಿಗೆ ಫಸ್ಟ್-ಕ್ಲಾಸ್ ನಲ್ಲಿ ಪಾಸಾದೆ.

ನಾಲ್ಕು ವರುಷ ಹೆಂಡತಿಯನ್ನು ತವರೂರಿನಲ್ಲಿಯೇ ಇರಿಸಿ, ಕಾಲೇಜು ಶಿಕ್ಷಣ ಮುಂದುವರಿಸಿದೆ. ಮದುವೆಯಲ್ಲಿ ಇಟ್ಟ ಬಂಗಾರದ ಉಂಗುರ ಮಾರಿ, ಭೂಮರಡ್ಡಿ ಕಾಲೇಜಿಗೆ ಪಿ.ಯು.ಸಿ. ಸೈನ್ಸ್ ಕಲಿಯಲು ಪ್ರವೇಶ ಪಡೆದೆ. ನನ್ನ ಹೆಂಡತಿಯ ಅಣ್ಣ, ಬಿ.ಎ. ಅಂತಿಮ ವರುಷದ ವಿದ್ಯಾರ್ಥಿಯಾಗಿದ್ದರು. ಆರಂಭದಲ್ಲಿ ಅವರೊಟ್ಟಿಗೆ ರೂಮ್ ಮೇಟ್ ಆಗಿ ಉಳಿದು ಅಭ್ಯಾಸ ಮಾಡುತ್ತಿದ್ದೆ. ಆರ್ಥಿಕ ಬಿಕ್ಕಟ್ಟು ಎದುರಿಸಿದೆ. ಪುಸ್ತಕ ಕೊಳ್ಳಲು ಹಣದ ಕೊರತೆ ಎದುರಿಸಿದೆ. ಆ ವರುಷ ೫೮% ಗುಣಗಳೊಂದಿಗೆ ಪಿ.ಯು. ಸಿ. ಸೈನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣನಾದೆ. ೩೦೦ ವಿದ್ಯಾರ್ಥಿಗಳಲ್ಲಿ ೯೦ ಜನ ಮಾತ್ರ ತೇರ್ಗಡೆಯಾಗಿದ್ದರು. ನನ್ನದು ಕಾಲೇಜಿಗೆ ಸೆಕೆಂಡ್ ರ್ಯಾನ್ಕ್ ಆಗಿತ್ತು. ತಂದೆ ಇಲ್ಲದ ಬಡ ವಿದ್ಯಾರ್ಥಿ ಎಂದು ಫ್ರಿಶಿಪ್ ಎನ್ನುವ ಸ್ಕಾಲರ್ಶಿಪ್ ಕೊಟ್ಟರು. ಹೀಗಾಗಿ ಕಾಲೇಜಿಗೆ ಕಟ್ಟಿದ ೩೦೦ ರೂಪಾಯಿ ಹಿಂದಕ್ಕೆ ಪಡೆದೆ. ಇದೇ ಹಣ ಭದ್ರವಾಗಿ ಉಳಿಸಿ,ಇದನ್ನೇ ಬಳಸಿ, ಮುಂದಿನ ವರುಷ ಬಿ.ಎಸ್.ಸಿ. ಭಾಗ-೧ಕ್ಕೆ ಪ್ರವೇಶ ಪಡೆದೆ. ಶೇಕಡಾ ೫೦ಕ್ಕಿಂತ ಅಧಿಕ ಗುಣಗಳು ಪಡೆದ ವಿದ್ಯಾರ್ಥಿಗಳು, ನ್ಯಾಶನಲ್ ಲೋನ್ ಸ್ಕಾಲರ್ಶಿಪ್ ಫಾರ್ಮ್ ತುಂಬಬಹದಾಗಿತ್ತು. ತಾಯಿಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಕರೆಯಿಸಿ, ಕೋರ್ಟ್ ಅಫಿಡಾವಿಟ್ ಮಾಡಿಸಿ, ಅರ್ಜಿ ಸಲ್ಲಿಸಿದೆ. ಇದರಿಂದ ಪದವಿಗಾಗಿ ಮೂರು ವರುಷದ ಲೋನ್ ಸ್ಕಾಲರ್ಶಿಪ್ ಗೆ ಆಯ್ಕೆಯಾದೆ. ವರುಷಕ್ಕೆ ರೂ. ೭೨೦ ಸಿಗುತ್ತಿತ್ತು. ಮೂರು ವರುಷ ಗಣಿತ ಮತ್ತು ಭೌತಶಾಸ್ತ್ರ ಅಧ್ಯಯನ ಗೈದು ೧೯೭೩ರಲ್ಲಿ ಡಿಗ್ರಿ ಅಂತಿಮ ಪರೀಕ್ಷೆ ಚೆನ್ನಾಗಿ ಬರೆದು, ೫೬% ಗುಣಗಳೊಂದಿಗೆ ಪಾಸಾದೆ.

೧೯೭೨-೭೩ ಭಾರತದ ಈ ಭಾಗದಲ್ಲಿ ಬರಗಾಲ ಇತ್ತು. ಅದೇಕೋ ಆ ವರುಷ ನನಗೆ ವಿದ್ಯಾರ್ಥಿ ವೇತನದ ಕಂತು(ಹಣ) ಬರಲಿಲ್ಲ. ಜೀವನ ಸಾಗಿಸುವುದು ಕಷ್ಟಕರವಾಗಿ ಪರಿಣಮಿಸಿತು. ಕನಿಷ್ಠ ಅಗತ್ಯಗಳಿಗೂ ಹಣ ಇರಲಿಲ್ಲ. ಅಕ್ಟೊಬರ್ ತಿಂಗಳ ಮಧ್ಯಂತರ ಬಿಡುವು ನೀಡಿದಾಗ ನಮ್ಮೂರಿಗೆ ತೆರಳಲು ನನ್ನಲ್ಲಿ ಬಸ್ ಟಿಕೇಟ್ ಪಡೆಯಲು ಕಾಸು ಇರಲಿಲ್ಲ. ಸಾಮಾನುಗಳನ್ನು ಹೊತ್ತುಕೊಂಡು ನಡೆದುಕೊಂಡೇ ನಮ್ಮೂರಿಗೆ ಹೋದೆ. ನಮ್ಮೂರಲ್ಲಿ ಬರಗಾಲದ ಫಂಡ್ ನಲ್ಲಿ ಹೊಸ ರೋಡ್ ನಿರ್ಮಾಣದ ಕೆಲಸ ನಡೆದಿತ್ತು. ಮೂರು ವಾರ ನಾನು ಅದರಲ್ಲಿ ಭಾಗವಹಿಸಿದೆ. ಇದರಿಂದ ರೂ. ೨೦ ಗಳಿಸಿದೆ. ಈ ಹಣ ಹಾಗೆ ಕಾದಿರಿಸಿಕೊಂಡೆ ಮತ್ತು ಮಧ್ಯಂತರ ಸೂಟಿ ಮುಗಿದ ಮೇಲೆ ನಡೆದುಕೊಂಡೇ ಬೀದರಿನ ಕಾಲೇಜಿಗೆ ಹಿಂತಿರುಗಿದೆ. ಒಂದು ತಿಂಗಳು ಕಳೆದ ಮೇಲೆ ನನ್ನ ಅಜ್ಜಿ ನನ್ನನ್ನು ಕಾಣಲು ಬೀದರಕ್ಕೆ ಬಂದರು. ಅವರು ನನ್ನ ಹಣಕಾಸಿನ ಪರಿಸ್ಥಿತಿ ನೋಡಿ, ತಮ್ಮ ಬಂಗಾರದ ಮೂಗುತಿಯನ್ನೇ ತೆಗೆದು ಕೊಟ್ಟರು. ಅದನ್ನು ಮಾರಾಟಮಾಡಿ ಫೈನಲ್-ಇಯರ್ ಪರೀಕ್ಷೆ ಮುಗಿಯುವ ವರೆಗೆ ಬೀದರಿನಲ್ಲಿ ಬದುಕುಳಿದೆ.

ಡಿಗ್ರಿ ಪರೀಕ್ಷೆ ಮುಗಿದ ನಂತರ, ೧೯೭೩ರ ಬೇಸಿಗೆಯಲ್ಲಿ ದಿನಾಲು ರೇಕುಲಗಿಯ ಶಾಮರಾಯ ಗೌಡರ ಮಕ್ಕಳಿಗೆ ಪಾಠ ಮಾಡಲು ಹೋಗುತ್ತಿದ್ದೆ. ಅವರು ಒಂದಿಷ್ಟು ಜೋಳ ಕೊಟ್ಟು ಸಹಕರಿಸಿದರು. ಆಮೇಲೆ ಬೀದರಿನ ಪಿ.ಡಬ್ಲ್ಯೂ.ಡಿ ಕಚೇರಿಯಲ್ಲಿ ತಾತ್ಕಾಲಿಕ ಕಲಿತ-ಕೂಲಿಕಾರ  ಕೆಲಸ ಮಾಡಿದೆ. ಅಲ್ಲಿ ತಿಂಗಳಿಗೆ ೧೦೦ ರೂಪಾಯಿ ಪಾಗಾರು ಪಡೆದು ನಾಲ್ಕೈದು ತಿಂಗಳು ಅಮ್ಮ ಮತ್ತು ಹೆಂಡತಿಯೊಂದಿಗೆ ಬಿದರಿನಲ್ಲಿಯೇ ಜೀವನ ಸಾಗಿಸಿದೆ.

ಇದೇ ಸಮಯಕ್ಕೆ ಪೇಪರ್ ಒಂದರಲ್ಲಿ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಆಪರೇಟರ್ ಹುದ್ದೆಗಾಗಿ ಪ್ರಕಟಣೆ ಹೊರಡಿಸಿದರು. ನಾನು ಅದಕ್ಕೆ ಅರ್ಜಿ ಸಲ್ಲಿಸಿದೆ. ನನ್ನ ಮೆರಿಟ್ ಆಧಾರವಾಗಿ ಟೆಲಿಫೋನ್ ಆಪರೇಟರ್ ನೌಕರಿಗೆ ಸೇರಿಕೊಂಡೆ. ಕಲಬುರಗಿಯಲ್ಲಿ ಎರಡು ತಿಂಗಳ ತರಬೇತಿ ಪಡೆದು, ಭಾಲ್ಕಿ ಪಟ್ಟಣದಿಂದ ೧೯೭೪ರ ಜೂಲೈ ತಿಂಗಳಲ್ಲಿ ಕೆಲಸಕ್ಕೆ ಹಾಜರಾದೆ. ಎರಡು ತಿಂಗಳಾದ ಮೇಲೆ ಬಾಡಿಗೆ ಮನೆ ಹಿಡಿದು, ಹೆಂಡತಿಯೊಂದಿಗೆ ಇರುತ್ತಿದ್ದೆ.

೧೯೭೫ರ ಜನೇವರಿಯಲ್ಲಿ ಅಮ್ಮನ ಆರೋಗ್ಯ ತೀರಾ ಕುಸಿಯಿತು. ಅವಳನ್ನು ಮಹಾರಾಷ್ಟ್ರದ ಅಂಬಾಜೋಗೈ ಆಸ್ಪತ್ರೆಯಲ್ಲಿ ಒಂದು ತಿಂಗಳು ಒಳರೋಗಿಯಾಗಿ ಅಡ್ಮಿಟ್ ಮಾಡಿ ಕೆಲಸಕ್ಕೆ ಹಿಂದಿರುಗಿದೆ. ತಿಂಗಳ ಪಗಾರ ಬಂದೊಡನೆ ಅಮ್ಮನನ್ನು ಕಾಣಲು ಹೋದೆ. ಅಮ್ಮನ ಆರೋಗ್ಯದಲ್ಲಿ ಸುಧಾರಣೆ ಆಗಿತ್ತು. ನನ್ನ ಕಂಡು ಅಮ್ಮ ಬಲು ಖುಷಿ ಪಟ್ಟರು. ಅವರನ್ನು ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಿಸಿ, ಬೀದರಕ್ಕೆ ರೈಲಿನಲ್ಲಿ ಕರೆತಂದು, ಔಷಧ ಕೊಡಿಸಿ ಊರಲ್ಲಿ ಬಿಟ್ಟು, ಕೆಲಸಕ್ಕೆ ಹಿಂತಿರುಗಿದೆ.

ಇದಾದ ಒಂದೆರಡು ತಿಂಗಳಲ್ಲಿ ತಂಗಿಯ ಬಾಣಂತನದಲ್ಲಿ ಏರುಪೇರಾಗಿ, ತಂಗಿ ಕೋಮಾದಲ್ಲಿದ್ದಳು. ಅವಳನ್ನು ಬೀದರಿನ ಮಿಷನ್ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿ ಮೂರು ವಾರ ಇರಿಸಲಾಯಿತು. ಅವಳ ದಾವಾಖಾನೆಯ ಖರ್ಚು ನಾನೇ ನಿಭಾಯಿಸಿದೆ. ಅವಳು ಚೇತರಿಸಿಕೊಂಡಳು. ಹೀಗೆ ಹಣ ವ್ಯಯವಾಗುತ್ತಲೇ ಇತ್ತು.

ಅಧಿಕಾರಿಯಾಗಬೇನ್ನುವ ಹಂಬಲದಿಂದ, ಬಿಡುವಿನ ಸಮಯದಲ್ಲಿ ಕೇಂದ್ರ ಸರ್ಕಾರದ ಅಸಿಸ್ಟಂಟ್ ಗ್ರೇಡ್ ಪರೀಕ್ಷೆಗಾಗಿ ಓದುತ್ತಿದ್ದೆ. ಬೇಸಿಗೆಯಲ್ಲಿ ಹೈದರಾಬಾದಿಗೆ ಹೋಗಿ ಎರಡು ದಿನಗಳ ಪರೀಕ್ಷೆ ಬರೆದೆ. ನನ್ನ ಪೇಪರ್ ಸರಿಯಾಗಿ ಬರೆಯಲು ಆಗಲಿಲ್ಲ. ನಾನು ಪರೀಕ್ಷೆಯಲ್ಲಿ ಸೋತಿದ್ದೆ. ಇದು ಪರೀಕ್ಷೆಯಲ್ಲಿ ನನ್ನ ಪ್ರಥಮ ಸೋಲಾಗಿತ್ತು. ಹೀಗೇಕಾಯಿತು ಅಂತ ಚಿಂತೆಗೀಡಾದೆ. ಈ ಮದ್ಯ ನನ್ನ ಹೆಂಡತಿಯ ಅಣ್ಣ ಬಂದು ಬಸುರಿಯಾದ ಅವಳನ್ನು ತವರೂರಿಗೆ ಕರೆದೊಯ್ದರು. ನಾನು ಚಿಂತೆಯಿಂದ ಸೊರಗುತ್ತಿದ್ದೆ. ಕೊನೆಗೆ ಜೀವನ ಸಾಕೆನಿಸಿತು. ಇರುವ ಕೆಲಸಕ್ಕೆ ಹೋಗಲಿಲ್ಲ. ನಾನು ಭ್ರಮಿತನಾಗಿದ್ದೆ.

ನನ್ನನ್ನು ಅರೆಹುಚ್ಚ ಎಂದು ತೀರ್ಮಾನಿಸಿ, ಉಪಚಾರ ಆರಂಭಿಸಿದರು. ಕೊನೆಗೆ ಹೈದರಾಬಾದ ಆಸ್ಪತ್ರೆಯಲ್ಲಿ ಮೆಂಟಲ್ ಶಾಕ್ ಕೊಡಿಸಿ, ೧೯೭೫ರ ಡಿಸೇಂಬರ್ ತಿಂಗಳಲ್ಲಿ ನಮ್ಮ ಸೋದರಮಾವನ ಊರಾದ ಸೀತಾಳಗೇರಿ ಯಲ್ಲಿ ಬಿಟ್ಟು ಬಿಟ್ಟರು. ೧೯೭೬ರ ಬೇಸಿಗೆಯಲ್ಲಿ ಅಂಬ್ರುತರಾವ್ ಎನ್ನುವ ಗೆಳೆಯನೊಂದಿಗೆ ಜೋಳದ ರಾಶಿ ಮಾಡುವಾಗ ಹೊಲಗದ್ದೆಗಳಲ್ಲಿಅಡ್ಡಾಡುತ್ತಿದ್ದೆ. ೧೯೭೬ರ ಜೂನ್ ತಿಂಗಳಲ್ಲಿ ಅಮೃತರಾವ್ ಅವರೊಂದಿಗೆ ಬೀದರಕ್ಕೆ ಹೋಗಿದ್ದೆ. ಅಲ್ಲಿ ಇನ್ನೊಬ್ಬ ಪರಿಚಯದ ಗೆಳೆಯ ಸಿಕ್ಕ. ಆತ ನನ್ನನ್ನು ತನ್ನ ಮನೆಗೆ ಕರೆದು, ಉಪಚರಿಸಿ, "ಭಾಲ್ಕಿಗೆ ಹೋಗಿ ಕೆಲಸ ಮಾಡು" ಅಂತ ಸಲಹೆ ಕೊಟ್ಟ. ಅದರಂತೆ ನಾನು ಜುಲೈ ತಿಂಗಳಲ್ಲಿ ಕೆಲಸಕ್ಕೆ ಹೋದೆ. ಒಂದು ತಿಂಗಳು ಕೆಲಸ ಮಾಡುತ್ತಿರುವಾಗ ಎದೆನೋವು ಕಾಣಿಸಿಕೊಂಡಿತ್ತು. ಆಗಸ್ಟ್ ತಿಂಗಳಲ್ಲಿ ಪುನಃ ಹೇಳದೆ, ಕೇಳದೆ ನಮ್ಮೂರಿಗೆ ಹಿಂತಿರುಗಿದೆ. ಸಪ್ಟೆಂಬರ್ ತಿಂಗಳಲ್ಲಿ ಒಂದಿಷ್ಟು ಪಾಗಾರದ ಹಣ ಬಂದಿತ್ತು. ಅದನ್ನು ಪಡೆದು, ಮನೆಯಲ್ಲಿ ಹೇಳದೆ ಕೇಳದೆ ಬೆಂಗಳೂರಿಗೆ ಎಸ್ಕೇಪ್ ಆದೆ. ಅಲ್ಲಿಂದ ರೈಲಿನಲ್ಲಿ ಪೂನಾ ನಗರಕ್ಕೆ ಹೋಗಿ ರಾತ್ರಿಯಲ್ಲಿ ಅಲ್ಲಲ್ಲಿ ಅಡ್ಡಾಡುವಾಗ ಪೊಲೀಸರು ಹಿಡಿದು ಜೈಲಿಗೆ ತಳ್ಳಿದರು. ಅದು ಇಂದಿರಾಜಿಯವರ ಎಮರ್ಜೆನ್ಸಿ ಹೇರಿದ ಕಾಲವಾಗಿತ್ತು. ಎರಡು ತಿಂಗಳು ಜೈಲು ವಾಸ ಮುಗಿದು, ೧೯೭೬ರ ನವಂಬರ್ ತಿಂಗಳಲ್ಲಿ ಅಮ್ಮನನ್ನು ಕಾಣಲು ಊರಿಗೆ ಹಿಂತಿರುಗಿ ಬಂದೆ. ಒಂದು ತಿಂಗಳು ನಮ್ಮೂರಿನಲ್ಲಿಯೇ ಉಳಿದುಕೊಂಡೆ. ಡಿಸೇಂಬರ್ ನಲ್ಲಿ ಮೇಲಾಧಿಕಾರಿಗಳು ಕೆಲಸಕ್ಕೆ ಹಿಂತಿರುಗುವಂತೆ ನೋಟೀಸು ಕೊಟ್ಟರು. ತಪ್ಪಿದಲ್ಲಿ ನಿಯಮದ ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಲಾಗಿತ್ತು, ನೋಟೀಸಿನಲ್ಲಿ. ಹಿರಿಯರು ಕೆಲಸಕ್ಕೆ ಹೋಗುವಂತೆ ಸಲಹೆ ಕೊಟ್ಟರು. ಆದರೂ ನನ್ನ ಮನಸ್ಸು ಇರಲಿಲ್ಲ. ಒಂದು ದಿನ ಅಮ್ಮ ಚೆನ್ನಾಗಿ ಬೈದು ರೇಗಿದರು. ೧೯೭೬ರ ಡಿಸೇಂಬರ್ ತಿಂಗಳ ಕೊನೆಯ ವಾರದಲ್ಲಿ ಜಿಲ್ಲಾ ಅರೋಗ್ಯ ಅಧಿಕಾರಿಗಳಿಂದ ೮೯ ದಿನಗಳ ಮೆಡಿಕಲ್ ಸರ್ಟಿಫಿಕೇಟ್ ಪಡೆದುಕೊಂಡು ಕೆಲಸಕ್ಕೆ ಪುನಃ ಹಾಜರಾದೆ. ೧೯೭೭ರ ಜನೆವರಿ ೧೪ರಂದು ರೇಕುಳಗಿ  ಶಂಭುಲಿಂಗನ ಜಾತ್ರಯ ನಿಮಿತ್ತ ಊರಿಗೆ ಹೋಗಿದ್ದೆ. ಅಮ್ಮನ ಅರೋಗ್ಯ ಕುಸಿದಿತ್ತು. ಅಂದು ರಾತ್ರಿ ಮಲಗುವ ಮುನ್ನ ಅಮ್ಮ ಕೊನೆಯ ಹಿತನುಡಿಗನನ್ನಾಡಿದರು. ತಂಗಿಯನ್ನು ಚೆನ್ನಾಗಿ ನೋಡಿಕೊ ಎಂದರು. ನಾನು ಮರುದಿನ ಕೆಲಸಕ್ಕೆ ಹೋದೆ. ನನಗೆ ಲೀವ್ ಸೆಟಲ್ ಆಗಿ ಪಗಾರ ಬರುವುದರೊಳಗೆ ೧೯೭೭ರ ಫೆಬ್ರವರಿಯಲ್ಲಿ ಅಮ್ಮ ತೀರಿಕೊಡರು. ನಾನು ಅಪ್ಪ, ಅಮ್ಮ ಇಲ್ಲದ ಏಕಾಂಕಿಯಾಗಿದ್ದೆ.

ಇತ್ತ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನನ್ನ ಲೀವ್ ಸೆಟಲ್ ಆಗಿ ಪಗಾರ ಬರುವುದು ಆರಂಭವಾಯಿತು. ಕೊಡಬೇಕಾದ ಬಾಕಿ ಹಣವನ್ನು ಸಹುದ್ಯೋಗಿಗಳಿಗೆ ಕೊಟ್ಟು, ಒಂದು ಸಣ್ಣ ಕೋಣೆ ಬಾಡಿಗೆ ಹಿಡಿದು ಪುನಃ ಒಂಟಿ ಜೀವನ ಸಾಗಿಸಿದೆ. ಹೋಟಲ್ ಒಂದರಲ್ಲಿ ತಿಂಗಳ ಊಟದ ವ್ಯವಸ್ಥೆ ಮಾಡಿಕೊಂಡು ಕೆಲಸ ಮಾಡುತ್ತಿದ್ದೆ. ಈ ಮಧ್ಯ ಎಲ್ಲ ಹಳೆಯ ಆಪರೇಟರ್ ಗಳು ವರ್ಗವಾಗಿ ಹೊಸದಾಗಿ ನೇಮಕಗೊಂಡವರು ಭಾಲ್ಕಿಗೆ ಬಂದರು. ಅವರಲ್ಲಿ ನಾನೇ ಹಿರಿಯನಾಗಿದ್ದೆ. ನನ್ನನ್ನು ಹೆಡ್-ಆಪರೇಟರ್ ಎಂದು ನೇಮಿಸಿದರು. ಇದರಿಂದ ನನಗೆ ರಾತ್ರಿ ಸರತಿಯಲ್ಲಿ ಕೆಲಸ ಮಾಡುವುದು ತಪ್ಪಿತು. ಮತ್ತು ಇದ್ದುದರಲ್ಲಿಯೇ ಹಿರಿಯ ಎನ್ನುವ ಖುಶಿಯಾಯಿತು.

ನಮ್ಮ ಆಫೀಸಿನಲ್ಲಿ ದತ್ತಾತ್ರಯ ಎನ್ನುವ ಟೆಕ್ನಿಷಿಯನ್ ವರ್ಗವಾಗಿ, ಕಲಬುರಗಿ ಎನ್ನುವ ಫೋನ್ ಇನ್ಸ್ಪೆಕ್ಟರ್ ಹೊಸದಾಗಿ ಬಂದರು. ಅವರು ಮೊದಲು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಟೆಲಿಫೋನ್ ಕೆಲಸ ಮಾಡಿದ ಅನುಭವಿಗಳಾಗಿದ್ದರು. ನನ್ನ-ಅವರ ಹೊಂದಾಣಿಕೆ ಚೆನ್ನಾಗಿತ್ತು.

ಹೀಗೆ ಜೀವನ ಸಾಗಿರುವಾಗ ಭಾಲ್ಕಿಯಲ್ಲಿ ನೀರಾವರಿ ಇಲಾಖೆಯಲ್ಲಿ ಕೆಲಸದಲ್ಲಿ ಇರುವ ಶ್ರೀಮಂಡಲದ ದೇಸಾಯಿ ಎನ್ನುವವರು, ನನ್ನನ್ನು ತಮ್ಮ ಮನೆಗೆ ಕರೆದು, ನನ್ನ ಯೋಗಕ್ಷೇಮ ವಿಚಾರಿಸಿ, ನಾನು ಸರಿಯಾಗಿ ಕೆಲಸ ಮಾಡುತ್ತಿರುವುದನ್ನು ನಮ್ಮ ಅತ್ತೆ-ಮಾವನವರಿಗೆ ತಿಳಿಸಿದರು. ಬೆಳಕೇರಿಯ ಭಾವ ಬಾಳಪ್ಪ ಮತ್ತು ಕೊಲ್ಲೂರಿನ ನನ್ನ ಸೋದರತ್ತೆ ಶಿವಮ್ಮಾ, ಶ್ರೀಮಂಡಲಕ್ಕೆ ತೆರಳಿ, ನನ್ನ ಹೆಂಡತಿಯನ್ನು ನನ್ನೊಂದಿಗಿರಲು ಭಾಲ್ಕಿಗೆ ಕಳುಹಿಸಬೇಕೆಂದು ಒತ್ತಾಯ ಹೇರಿದರು. ಇದರಿಂದಾಗಿ ನನ್ನ ಹೆಂಡತಿ, ನನ್ನ ಒಂದುವರೆ ವರುಷದ ಮಗುವಿನೊಂದಿಗೆ ಮುಂಗಾರು ಮಳೆಗೆ ಮುನ್ನ ಭಾಲ್ಕಿಗೆ ಆಗಮಿಸಿದಳು. ಜೀವನ ಪುನಃ ಚಿಗುರೊಡೆಯಿತು. ೧೯೭೮ರಲ್ಲಿ ಮಗನ ಜನನ ಸಂತಸ ತಂದಿತು. ನಮ್ಮೂರಲ್ಲಿ ಮಗನ ತೊಟ್ಟಿಲು ಕಾರ್ಯಕ್ರಮ ನೆರವೇರಿತು.

ರಮೇಶ್ ಭಗವತಿ ಎನ್ನುವ ನನ್ನ ಸಹಪಾಠಿಯೊಬ್ಬರು, ನಮ್ಮ ಇಲಾಖೆಯಲ್ಲಿ ನಾಲ್ಕು ವರುಷಗಳ ಸೇವೆಗೈದ ನಂತರ, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉನ್ನತ ಹುದ್ದೆಗೆ ಬಡತಿ ಪಡೆಯಬಹುದಾದ ಮಾಹಿತಿ, ಹಾಗು ಅದಕ್ಕಾಗಿ ಓದಬೇಕಾದ ವಿಜ್ಞಾನ ಪಠ್ಯದ ಸಿಲೇಬಸ್ ತಂದರು. ಅದು ಪ್ರಧಾನವಾಗಿ, ಇಂಗ್ಲಿಷ್, ಸಾಮಾನ್ಯ ವಿಜ್ಞಾನ, ವಿದ್ಯುತ್ ಆಯಸ್ಕಾನ್ತಿಯ ವಿಜ್ಞಾನ ಮತ್ತು ಗಣಿತದ ವಿಷಯವಾಗಿತ್ತು. ಈ ಎಲ್ಲ ವಿಷಯಗಳು ನನ್ನ ವಿಜ್ಞಾನ ಪದವಿಗಾಗಿ ಕಲಿತದ್ದೇ ಆಗಿತ್ತು. ಆದ್ದರಿಂದ ನನ್ನ ಕುತೂಹಲ ಹೆಚ್ಚಿತು. ಯಾವ ಮುಂದಾಲೋಚನೆ ಇಲ್ಲದೆ, ಭಗವತಿ ಮತ್ತು ನಾನು ಜೂನಿಯರ್ ಇಂಜಿನಿಯರ್  ಪರೀಕ್ಷಗೆ ಅರ್ಜಿ ಸಲ್ಲಿಸಿದೆವು. ಆದರೆ ಪರೀಕ್ಷಗಾಗಿ ತಯ್ಯಾರಿ ಏನೂ ಮಾಡಿರಲಿಲ್ಲ. ಮುಂದೊಂದು ದಿನ ೧೯೭೯ರ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಪರೀಕ್ಷೆಯ ಹಾಲ್ ಟಿಕೆಟ್ ನಮ್ಮ ಕೈ ಸೇರಿದವು. ಕಲಬುರಗಿಯಲ್ಲಿ ಪರೀಕ್ಷೆ ಬರೆಯಲು ಹೋಗಿ, ಭಗವತಿಯ ಅಕ್ಕನ ಮನೆಯಲ್ಲಿ ರಾತ್ರಿ ಕಳೆದು, ಮುಂಜಾನೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾದೆವು. ದಿನಕ್ಕೆರಡು ಪೇಪರ್ ನಂತೆ ಎರಡು ದಿನಗಳ ಪ್ರಶ್ನೆ ಪತ್ರಿಕೆ ಬಿಡಿಸಿದೆವು. ಪರೀಕ್ಷೆಯ ಅನುಭವ ಪಡೆದುಕೊಂಡೆವು. ಪರೀಕ್ಷೆಯ ನಂತರ ಹಿಂತಿರುಗುವಾಗ, ಬಹಳಷ್ಟು ಅಭ್ಯರ್ಥಿಗಳು ಪಿ.ಯು.ಸಿ. ಸೈನ್ಸ್ ಪುಸ್ತಕಗಳನ್ನೇ ಓದುತ್ತಿರುವುದನ್ನು ಗಮನಿಸಿ, ಮನೆಗೆ ಹಿಂತಿರುಗುವಾಗ ನಾವೂ ಕೂಡ ಪಿ.ಯು.ಸಿ. ವಿಜ್ಞಾನ ಮತ್ತು ಗಣಿತ ಪುಸ್ತಕಗಳನ್ನು ಕೊಂಡುತಂದೆವು.

ಈ ಪುಸ್ತಕದ ಅಧ್ಯಯನದಿಂದ ಪರೀಕ್ಷೆಯ ೮೦% ಪ್ರಶ್ನೆಗಳನ್ನು ಉತ್ತರಿಸಬಹುದೆಂದು ಕಂಡುಕೊಂಡೆವು. ನಾನು ಟೆಲಿಫೋನ್ ಇನ್ಸ್ಪೆಕ್ಟರ್ ಹುದ್ದೆಗಾಗಿ ಸಹ ಅಪ್ಲಿಕೇಶನ್ ಹಾಕಿದ್ದೆ. ಆಪರೇಟರ್ ಕೆಲಸದೊಂದಿಗೆ, ಬಿಡುವಿನ ವೇಳೆಯಲ್ಲಿ, ಸುಮಾರು ಮುರುವಾರಗಳ ವರೆಗೆ ಪ್ರಶ್ನೆ-ಪತ್ರಿಕೆಯ ಪ್ರಶ್ನೆಗಳು ಬಿಡಿಸುವ ಅಭ್ಯಾಸ ಮಾಡಿದೆ. ಒಂದು ತಿಂಗಳಾದ ಮೇಲೆ, ಅದೇ ವರುಷ ನಾನು ಟೆಲಿಫೋನ್ ಇನ್ಸ್ಪೆಟರ್ ಹುದ್ದೆಗಾಗಿ ಪರಿಕ್ಷೆ ಬರೆದು ಸ್ಪರ್ದ್ಯೆಯಲ್ಲಿ ಯಸೆಸ್ವಿಯಾದೆ. ಕಲಬುರಗಿ ವಿಭಾಗದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇವಲ ಇಬ್ಬರು ಮಾತ್ರ ಸಫಲರಾಗಿದ್ದೆವು.

೧೯೮೦ರ ಫೆಬ್ರುವರಿ ತಿಂಗಳಲ್ಲಿ ನನ್ನ ಸೆಲೆಕ್ಷೆನ್ ಆರ್ಡರ್ ನನ್ನ ಕೈ ಸೇರಿದಾಗ, ನನಗೆ ಎಲ್ಲಿಲ್ಲದ ಖುಷಿ ತಂದಿತು. ಕೊನೆಗೂ ನನ್ನ ವಿದ್ಯ ಫಲ ನೀಡಿತು. ಸಣ್ಣ ಕೆಲಸ ಎನ್ನುವ ಚಿಂತೆಯಿಂದ ಹೊರಗೆ ಬಂದೆ. ಆದರೆ ಅದನ್ನು ನೋಡಲು ಅಪ್ಪ ಅಮ್ಮ ಬದುಕಿರಲಿಲ್ಲ. ೧೯೮೦ರ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಆರು ತಿಂಗಳು ಟ್ರೇನಿಂಗ ಆರ್.ಟಿ.ಟಿ .ಸಿ. ಹೈದರಾಬಾದಿನಲ್ಲಿ ನೆರವೇರಿತು. ಅಕ್ಟೊಬರ್- ನವೆಂಬೆರ್ ತಿಂಗಳಲ್ಲಿ ಹೊಸಪೇಟೆಯಲ್ಲಿ ಫೀಲ್ಡ್ ಟ್ರೇನಿಂಗ ಪಡೆದು, ಡಿಸೇಂಬರ್ ೧೯೮೦ರಲ್ಲಿ ಸಂಡೂರಿನಲ್ಲಿ ಫೋನ್ ಇನ್ಸ್ಪೆಕ್ಟರ್ ಹುದ್ದೆ ಅಲಂಕರಿಸಿದೆ. ಎರಡು ವರುಷ ಇಲ್ಲಿಯೇ ಮನೆ ಮಾಡಿ ಕೆಲ್ಸದಲ್ಲಿದ್ದೆ. ಸಂಡೂರು ಟೆಲಿಫೋನ್ ಆಫೀಸ್ ಇಂಚಾರ್ಜ್ ನಾನೆ ಹೊಂದಿದ್ದೆ.

ಟೆಲಿಪೋನ್ ಇನ್ಸ್ಪೆಕ್ಟರ್ ಕೆಲಸಕ್ಕಾಗಿ ಅಷ್ಟೇನು ವಿಶೇಷ ಅಧ್ಯಯನ ಮಾಡಿರಲಿಲ್ಲ. ಹೈದರಾಬಾದಿನಲ್ಲಿ ತರಬೇತಿ ಪಡೆಯುವಾಗ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಜೂನಿಯರ್ ಇಂಜಿನಿಯರ್ ಭರ್ತಿ ಆಗುವುದಿದೆ ಎಂದು ಗೊತ್ತಾಗಿತ್ತು. ಆದ್ದರಿಂದ ಅದಕ್ಕಾಗಿ ಓದಬೇಕಾದ ಪುಸ್ತಕಗಳನ್ನು ಸಂಡೇ ಮಾರ್ಕೆಟ್ನಲ್ಲಿ ಹುಡುಕಿ ಕೋಂ ಡುಕೊಡಿದ್ದೆ. ಸಂಡೂರಿನಲ್ಲಿ ಕೆಲಸದ ಒತ್ತಡ ಅಷ್ಟೇನು ಇರಲಿಲ್ಲ. ಖಾಲಿ ಸಮಯದಲ್ಲಿ ಈ ಪುಸ್ತಕಗಳನ್ನು ಅಧ್ಯಯನ ಮಾಡುತ್ತಿದ್ದೆ. ೧೯೮೨ರಲ್ಲಿ ಬಳ್ಳಾರಿ ಕೇಂದ್ರದಿಂದ ಜೂನಿಯರ್ ಇಂಜಿನಿಯರ್ ಪರೀಕ್ಷೆ ಬರೆದು ಸಫಲನಾದೆ. ೧೯೮೩ರಲ್ಲಿ ತಿರುವನಂತಪುರಂ ನಲ್ಲಿ ತಂತ್ರಜ್ಞಾನದ ತರಬೇತಿಪಡೆದು ಮಾರ್ಚ್ ೧೯೮೪ರಲ್ಲಿ ರಾಯಚೂರಿಗೆ ಕಿರಿಯ ಅಭಿಯಂತ ಎಂದು ಕೆಲಸಕ್ಕೆ ಹಾಜರಾದೆ. ಈಗ ನನ್ನ ಡಿಗ್ರಿ ಓದಿಗೆ ತಕ್ಕುದಾದ ಕೆಲಸ ಗಿಟ್ಟಿಸಿದೆ. ಪರಮಾನಂದವಾಗಿ ಅಲ್ಲಿಯೇ ಮುಂದೆ ೧೨ ವರುಷ ಟೆಲಿಕಾಂ ಸೇವೆ ಸಲ್ಲಿಸಿದೆ.

ನಾನು ಟೆಲೆಕ್ಸ್ ಎಕ್ಸ್ಚೇಂಜ್ ನೋಡಿಕೊಳ್ಳುವಾಗ, ಸತ್ಯನಾರಾಯಣ ಮೂರ್ತಿ ಎಂಬ ಟೆಕನಿಸಿಯನ್ ನನ್ನೊಂದಿಗೆ ಕೆಲಸ ಮಾಡುತ್ತಿದ್ದರು. ಮುಂದೆ ಅವರಿಗೆ ಜೆ.ಇ. ಪ್ರಮೋಷನ್ ಆಗಿ ಬೀದರಕ್ಕೆ ವರ್ಗವಾಯಿತು. ೧೯೯೬ರಲ್ಲಿ ಅವರು ನನ್ನೊಂದಿಗೆ ಮ್ಯುಚುಯಲ್ ಟ್ರಾನ್ಸ್ಫರ್ ಪಡೆದು ರಾಯಚೂರಿಗೆ ಹೋದರು. ನಾನು ಬೀದರಕ್ಕೆ ಬಂದೆ. ಬೀದರಿನಲ್ಲಿ ಜೆ.ಟಿ.ಓ. ಕೇಬಲ್ಸ್ ಎಂದು ಮೂರು ವರುಷ ಕೆಲಸ ಮಾಡಿದೆ. ೧೯೯೯ರಲ್ಲಿ ಎಸ್.ಡಿ.ಇ. ಕಮರ್ಸಿಯಲ್ ಎಂದು ಅಧಿಕಾರ ವಹಿಸಿಕೊಂಡೆ. ಹತ್ತು ವರುಷ ಅಧಿಕಾರಿಯಾಗಿ ಬೀದರ್ ನಗರದಲ್ಲಿ ಟೆಲಿ-ಸಂಪರ್ಕ ಜಾಲ ವ್ರದ್ಧಿಸುವುದರಲ್ಲಿ ತೊಡಗಿಸಿಕೊಂಡೆ. ೨೦೦೯ರಲ್ಲಿ ಕೆಲಸದಿಂದ ವಿಶ್ರಾಂತಿ ಪಡೆದೆ.

No comments:

Post a Comment