Wednesday 28 July 2021

 ರಸಾಯನ ಶಾಸ್ತ್ರದ ಇತಿಹಾಸ :

ಈ ಜಗತ್ತು ಪಂಚಮಹಾಭೂತಗಳಿಂದ ಆಗಿದೆ ಎಂದರು ಹಿಂದಿನವರು. ಆಕಾಶ , ಅಗ್ನಿ , ವಾಯು , ಜಲ ಮತ್ತು ಮಣ್ಣು ; ಈ ಪಂಚಮಹಾಭೂತಗಳು .

ವಸ್ತು , ಶಕ್ತಿ , ಆಕಾಶ ಮತ್ತು ಕಾಲ ಎಂದು ಇಂದಿನವರು ವರ್ಗಿಕರಣ ಮಾಡಿದರು . ವಾಯು, ಜಲ, ಮತ್ತು ಮಣ್ಣನ್ನು ಒಟ್ಟಿಗೆ ದ್ರವ್ಯ ಎಂದರು . ದ್ರವ್ಯವು ಸ್ಥಳವನ್ನು ಆಕ್ರಮಿಸುತ್ತದೆ . ಅದಕ್ಕೆ ದ್ರವ್ಯರಾಶಿ ಇದೆ .

೧೬೬೧ರಲ್ಲಿ ರಾಬರ್ಟ ಬಾಯ್ಲ್  ಧಾತುವಿನ ಪರಿಕಲ್ಪನೆ ನಿರೂಪಿಸಿದ . ಆತನು ಆಮ್ಲ ಮತ್ತು ಪ್ರತ್ಯಾಮ್ಲಗಳ ವಿವರ ನೀಡಿದ.

ಈತನು ಗಾಳಿಯ ಗುಣಗಳು ಅಧ್ಯಯನ ಮಾಡಿ, ಒಂದು ನಿರ್ದಿಷ್ಟ ರಾಶಿಯ ಅನಿಲದ ಗಾತ್ರ, ಒತ್ತಡ, ಹಾಗೂ ಉಷ್ಣತೆಯ ಸಂಭಂದದ ನಿಯಮವನ್ನು ನಿರೂಪಿಸಿದನು. 

ಒಂದೇ ಪ್ರಕಾರದ ಮೂಲ ಕಣಗಳಿಂದ ಆದ ದ್ರವ್ಯವನ್ನು ಧಾತು ಅಥವಾ ಮೂಲವಸ್ತು ಎಂದರು. ಒಂದು ಧಾತುವಿನ ಅತಿಸಣ್ಣ ಕಣಕ್ಕೆ ಪರಮಾಣು ಎಂದರು. ಒಂದೇ ಪ್ರಕಾರದ ಪರಮಾಣುಗಳಿಂದ ಆದ ವಸ್ತುವೇ ಧಾತು.

೧೮ನೇಯ ಶತಮಾನದಲ್ಲಿ ಜಲಜನಕ , ಆಮ್ಲಜನಕ . ಮತ್ತು ಇಂಗಾಲದ ಡೈ ಅಕ್ಸಯಿಡ್ ಎನ್ನುವ ಅನಿಲಗಳ ಶೋಧ ಮತ್ತು ಅವುಗಳ ಗುಣಗಳ ಅಧ್ಯಯನ ನಡೆಯಿತು .

೧೭೫೪ರಲ್ಲಿ ಜೋಸೆಫ್ ಬ್ಲ್ಯಾಕ್ ಎನ್ನುವ ಉಪನ್ಯಾಸಕನು ಸುಣ್ಣದ ಕಲ್ಲನ್ನು ಕಾಯಿಸಿ ಅದರಿಂದ ಇಂಗಾಲದ ಡೈ ಅಕ್ಸಯಿಡ್ ಅನಿಲ ಹೊರಸೂಸುವುದನ್ನು ಗಮನಿಸಿದನು. ಈತನು ನೀರಿನ ಗುಪ್ತೋಷ್ಣವನ್ನು ವಿವರಿಸಿದನು.

೧೭೬೬ರಲ್ಲಿ ಹೆನ್ರಿ ಕೆವೆಂಡಿಷ್ ತನ್ನ ಪ್ರಯೋಗಶಾಲೆಯಲ್ಲಿ ಜಲಜನಕ ಅನಿಲವನ್ನು ಕಂಡುಹಿಡಿದನು. 

೧೭೭೪ರಲ್ಲಿ ಪ್ರೀಸ್ಟ್ಲೆ ಪಾದರಸದ ಆಕ್ಸಯಿಡ್  ಅದಿರು ಕಾಯಿಸಿ ಆಮ್ಲಜನಕ ಅನಿಲ ಕಂಡುಹಿಡಿದನು .

೧೭೭೮ರಲ್ಲಿ ಫ್ರಾನ್ಸ ದೇಶದ ಲಾವೋಷಿಯೆರ್ ಎನ್ನುವ ವಿಜ್ಞಾನಿ ದಹನ ಕ್ರಿಯೆಯನ್ನು ವಿವರಿಸಿದನು . ಈತನು ಆಮ್ಲಜನಕ ಒಂದು ಧಾತು ಎಂದು ವಿವರಿಸಿದನು . ನಿಸರ್ಗದಲ್ಲಿ ಸಹಜವಾಗಿ ಆಮ್ಲಜನಕವು ಅನಿಲ ರೂಪದಲ್ಲಿ ಇರುತ್ತದೆ. ಗಾಳಿಯಲ್ಲಿ ೨೧% ಆಮ್ಲಜನಕ ಇದೆ . ಇದು ಕ್ರಿಯಾಶೀಲವಾಗಿದ್ದು ಅನ್ಯ ಧಾತುಗಳೊಂದಿಗೆ ರಾಸಾಯನಿಕವಾಗಿ ವರ್ತಿಸಿ ಆಕ್ಸಯಿಡಗಳನ್ನು ಉಂಟುಮಾಡುತ್ತದೆ ಎಂದು ತೋರಿಸಿದನು. ಗಾಳಿಯಲ್ಲಿ ೭೮% ಸಾರಜನಕ ಅನಿಲ ಇದೆ. ಉಳಿದ ಭಾಗ ಜಡ ಅನಿಲಗಳದ್ದು. ನೀರಾವಿಯ ಪ್ರಮಾಣ ಸದಾ ಬದಲಾಗುತ್ತಇರುತ್ತದೆ.

೧೭೮೯ರಲ್ಲಿ ಲಾವೋಷಿಯರನು ಮೊದಲಬಾರಿಗೆ ಅಂದಿನವರೆಗೆ ತಿಳಿದಿರುವ ೨೩ ಧಾತುಗಳ ಪಟ್ಟಿ ಮಾಡಿದನು . ಈತನು ರಾಸಾಯನಿಕ ಬದಲಾವಣೆಯಲ್ಲಿ ಭಾಗವಹಿಸುವ ಧಾತುಗಳ ರಾಶಿ ಸಂರಕ್ಚೆಣೆಯ ನಿಯಮವನ್ನು ವಿವರಿಸಿದನು. ಈತನನ್ನು ರಸಾಯನ ಶಾಸ್ತ್ರದ ಪಿತಾಮಹ ಎಂದು ಪರಿಗಣಿಸಲಾಗುತ್ತದೆ.

೧೭೯೪ರ ಫ್ರೆಂಚ್ ಕ್ರಾಂತಿಯಲ್ಲಿ ವಿಜ್ಞಾನಿ ಲಾವೊಸಿರನು ಕೊಲೆಯಾದನು. 

೧೭೮೯ ರಲ್ಲಿ  ಪ್ರೌಸ್ಟ್  ಎನ್ನುವ  ವಿಜ್ಞಾನಿಯು  ಎರಡು ಧಾತುಗಳು ರಾಸಾಯನಿಕವಾಗಿ ಸಂಯೋಗ ಹೊಂದುವಾಗ ಅವು ಒಂದು ನಿರ್ದಿಷ್ಟ ರಾಶಿಯ ಅನುಪಾತದಲ್ಲಿ ಸೇರಿಕೊಳ್ಳುತ್ತವೆ  ಎಂದು ನಿರೂಪಿಸಿದರು.

೧೮೦೦ರಲ್ಲಿ ನೀರಿನಲ್ಲಿ ವಿದ್ಯುತ್ ಪ್ರವಾಹ ಹರಿಸಿ , ನೀರನ್ನು ವಿಭಜಿಸಿ ಆಮ್ಲಜನಕ ಮತ್ತು ಜಲಜನಕ ಅನಿಲಗಳಾಗಿ ವಿಂಗಡಿಸಿದರು . ಆದ್ದರಿಂದ ನೀರು ಮೂಲವಸ್ತು ಅಲ್ಲ ಬದಲಿಗೆ ಇದೊಂದು ಸಂಯುಕ್ತ ವಸ್ತು ಎಂದು ಖಚಿತವಾಯಿತು .

ಈ ಪ್ರಯೋಗದಲ್ಲಿ ಹೊರಸೂಸಿದ ಜಲಜನಕ ಮತ್ತು ಆಮ್ಲಜನಕ ಅನಿಲಗಳ ಗಾತ್ರದ ಅನುಪಾತ ೨:೧ ಇರುತ್ತದೆ. ಅಂದರೆ ಎರಡು ವಿಭಿನ್ನ ಅನಿಲಗಳು ಒಂದು ನಿರ್ದಿಷ್ಟ ಗಾತ್ರದ ಅನುಪಾತದಲ್ಲಿ ಸೇರಿ ಸಂಯುಕ್ತ ವಸ್ತು ರೂಪಗೊಳ್ಳುತ್ತದೆ ಎಂದು ಸಿದ್ದವಾಯಿತು. ಇದನ್ನು ಗೆ ಲುಸಾಕಾರ ನಿಯಮ ಎನ್ನುವರು.

ನೀರು ವಿಭಜಿಸುವ ರಾಸಾಯನಿಕ ಕ್ರಿಯೆಗೆ ಹೊರಗಿನಿಂದ ಶಕ್ತಿ ಒದಗಿಸಬೇಕಾಯಿತು. ಇದಕ್ಕೆ ವಿರುದ್ಧವಾಗಿ ಜಲಜನಕ ಮತ್ತು ಆಮ್ಲಜನಕ ಅನಿಲಗಳು ರಾಸಾಯನಿಕವಾಗಿ ಸೇರಿ, ನೀರು ಉಂಟಾಗುವ ಬದಲಾವಣೆಯಲ್ಲಿ ಶಕ್ತಿ ಹೊರಗೆ ಹಾಕಲಾಗುತ್ತದೆ. ಹೀಗೆ ಶಕ್ತಿಯನ್ನು ಪಡೆದುಕೊಳ್ಳುವ ಅಥವಾ ಶಕ್ತಿಯನ್ನು ಹೊರಚೆಲ್ಲುವ, ಎರಡು ಪ್ರಕಾರದ ರಾಸಾಯನಿಕ ಕ್ರಿಯೆಗಳಿರುತ್ತವೆ.

೧೮೦೩ರಲ್ಲಿ ಡಾಲ್ಟನ್ ಎನ್ನುವ ವಿಜ್ಞಾನಿ ಧಾತುವಿನ ಪರಮಾಣು ಸಿಧಾಂತವನ್ನು ಮಂಡಿಸಿದನು. ಧಾತುಗಳು ಪರಮಾಣುಗಳೆಂಬ ಒಡೆಯಲಾಗದ ಅತಿಸಣ್ಣ ಕಣಗಳಿಂದ ಆಗಿವೆ ಎಂದು ವಿವರಿಸಿದನು . ವಿವಿಧ ಧಾತುಗಳ ಪರಮಾಣುಗಳು ಭಿನ್ನ ಭಿನ್ನ ರಾಶಿಯನ್ನು ಹೊಂದಿರುವುದಾಗಿ ತಿಳಿಸಿದನು . ಈತನು ಮೊದಲಬಾರಿಗೆ ಧಾತುಗಳ ಸಾಪೇಕ್ಷ ಪರಮಾಣು ರಾಶಿಗಳ ಪಟ್ಟಿ ಮಾಡಿದನು .

೧೮೧೧ರಲ್ಲಿ ಅವಗಾಡ್ರೋ ಎನ್ನುವ ವಿಜ್ಞಾನಿ ಅನಿಲಗಳ ಅಣು ರೂಪದ ಕಣಗಳ ಮೇಲೆ ಪ್ರಯೋಗಗಳನ್ನು ಮಾಡಿ; ಸಮಾನ ಗಾತ್ರದ ಯಾವುದೇ ಅನಿಲಗಳು ಸಮಾನ ಪ್ರಮಾಣದ ಕಣಗಳು ಹೊಂದಿರುತ್ತವೆಂದು ಪ್ರತಿಪಾದಿಸಿದನು.

ಸಮಾನ ಗಾತ್ರದ ಜಲಜನಕ ಹಾಗು ಅಮ್ಲಜನಕ ಅನಿಲಗಳ ರಾಶಿಯು ೧:೧೬  ಅನುಪಾತದಲ್ಲಿ ಇರುತ್ತದೆ. ಜಲಜನಕದ ಪರಮಾಣುವಿನ ಸಾಪೇಕ್ಷೆರಾಶಿ ೧ ಆದರೆ ಆಮ್ಲಜನಕದ್ದು ೧೬ ಆಗುತ್ತದೆ. ನೀರಿನ ಅಣು ರಾಶಿ ೧೮ ಇರುತ್ತದೆ.  ೧೮ ಗ್ರಾಂ ನೀರನ್ನು ಒಂದು ಮೋಲ್ ನೀರು ಎನ್ನುವರು. ಒಂದು ಮೋಲ್ ನೀರಿನಲ್ಲಿ ೬.೦೨೨ x ೧೦ರ ಘಾತ ೨೩ ನೀರಿನ ಕಣಗಳಿವೆ. ಇದನ್ನು ಅವಗಾಡ್ರೋ ಸಂಖ್ಯೆ ಎಂದು ಸೂಚಿಸುವರು. 

೧೮೧೨ರಲ್ಲಿ ಹಂಫ್ರಿ ಡೇವಿ ಎನ್ನುವ ವಿಜ್ಞಾನಿಯು ಲವಣಗಳ ಮೇಲೆ ಪ್ರಬಲವಾದ ವಿದ್ಯುತ್ ಹರಿಸಿ, ರಾಸಾಯನಿಕ ಬದಲಾವಣೆ ಉಂಟುಮಾಡಿ, ಹೊಸ ಧಾತುಗಳ ಶೋಧ ಮಾಡಿದನು. ಈತನು ಪೊಟ್ಯಾಸಿಯಂ ಸೋಡಿಯಂ, ಕ್ಯಾಲ್ಸಿಯಂ ಮ್ಯಾಗ್ನೇಸಿಯಂ ಬೇರಿಯಂ ಮತ್ತು ಸ್ಟ್ರಾನಟಿಯಂ ಧಾತುಗಳನ್ನು ಕಂಡುಹಿಡಿದನು. ಅಲ್ಲದೆ ಕ್ಲೋರಿನ್ ಅನಿಲವೂ ಕೂಡಾ ಒಂದು ಧಾತು ಎಂದು ಸಿದ್ಧಮಾಡಿದ.

೧೮೨೬ ರಲ್ಲಿ ಡಾಲ್ಟನ್ನ ಶಿಷ್ಯನಾದ ಬರ್ಜೆಲಿಯಸನೂ, ಧಾತುಗಳನ್ನು ಹೆಸರಿಸಿದ  ಮತ್ತು ಅವುಗಳ ಹೆಸರಿನ ಮೂಲಾಕ್ಷರದಿಂದ ಧಾತುಗಳನ್ನು ಸಾಂಕೇತಿಕವಾಗಿ ಬರೆಯುವ ಕಲೆ ರೂಢಿಸಿದನು . ಇದರಿಂದ ಸಂಯುಕ್ತ ವಸ್ತುಗಳನ್ನು ಸಾಂಕೇತಿಕವಾಗಿ ಅಣು ಸೂತ್ರದ ರೂಪದಲ್ಲಿ ಬರೆಯಲು ಅನುಕೂಲವಾಯಿತು.

೧೮೨೮ರಲ್ಲಿ ವೋಹ್ಲರನು  ಮೊದಲಬಾರಿಗೆ ನಿರಯವ ರಾಸಾಯನಗಳನ್ನು ಬಳಸಿ, ಜೀವಿಗಳಲ್ಲಿ ಕಂಡುಬರುವ ಯೂರಿಯಾ ಎನ್ನುವ ಸಾವಯವ ಪದಾರ್ಥವನ್ನು ತಯ್ಯಾರಿಸಿದನು.

೧೮೩೦ರ ವರೆಗೆ ಕಂಡುಹಿಡಿದ ಧಾತುಗಳ ಸಂಖ್ಯೆ ೫೪ಕ್ಕೆ ಏರಿತು.

೧೮೩೪ರಲ್ಲಿ ಮೈಕಲ್ ಫ್ಯಾರಡೆಯವರ ನಿರೂಪಣೆ ; "ಅಯಾನಿಕ್ ದ್ರಾವಣಗಳಲ್ಲಿ ವಿದ್ಯುತ್ ಹರಿಸಿದಾಗ ಉಂಟಾಗುವ ರಾಸಾಯನಿಕ ಬದಲಾವಣೆಯು, ದ್ರಾವಣದಲ್ಲಿ ಹರಿಸಿದ ಒಟ್ಟು ವಿದ್ಯುತ್ತಿನ ಮೊತ್ತಕ್ಕೆ ಅನುರೂಪವಾಗಿ ಇರುತ್ತದೆ."

೧೮೪೧ರಲ್ಲಿ ಲಂಡನ್ ಪಟ್ಟಣದಲ್ಲಿ ರಾಸಾಯನ  ಶಾಸ್ತ್ರದ ಸಂಘ  ಸ್ಥಾಪನೆಗೊಂಡಿತು. 

೧೮೫೨ರಲ್ಲಿ ರಾಸಾಯನಿಕ ಸಂಯೋಗ ಸಾಮರ್ತ್ಯಯ ನಿರೂಪಣೆಯಾಯಿತು.

೧೮೫೯ರಲ್ಲಿ ಬನ್ಸೆನ್ ರೂ, ಪ್ರತಿಯೊಂದು ಧಾತುವು ತನ್ನದೇ ಆದ,  ವಿಶಿಷ್ಟ ಬೆಳಕಿನ ವರ್ಣಪಟಲವನ್ನು ಉಂಟುಮಾಡುತ್ತದೆ ಎಂದು ಕಂಡುಹಿಡಿದರು. ಈ ವಿಧಾನವು ಹೊಸ ಧಾತುಗಳನ್ನು ಕಾಡುಹಿಡಿಯಲು ಅನುಕೂಲವಾಯಿತು. 

೧೮೬೦ರಲ್ಲಿ ವಿಜ್ಞಾನಿ ಕೆಕೂಲೆಯವರ ನೇತ್ರಿತ್ವದಲ್ಲಿ , ಜರ್ಮನಿ ದೇಶದಲ್ಲಿ ಮೊದಲಬಾರಿಗೆ ಜಾಗತಿಕ ರಸಾಯನ ಶಾಸ್ತ್ರದ ಸಮ್ಮೇಳನ ಏರ್ಪಟ್ಟಿತ್ತು. ಇದರಲ್ಲಿ ೧೪೦ ಜನ ವಿಜ್ಞಾನಿಗಳು ಪಾಲ್ಗೊಂಡರು.

೧೮೬೯ರಲ್ಲಿ ಸೈಬೀರಿಯಾದ ವಿಜ್ಞಾನಿ ಮೆಂಡೆಲಿವರು ಧಾತುಗಳ ಆವರ್ತಕ ಕೋಷ್ಟಕವನ್ನು ಪ್ರಕಟಿಸಿದರು. ಅವರು ಅಲ್ಲಿಯವರೆಗೆ ತಿಳಿದಿರುವ ೬೬ ಧಾತುಗಳನ್ನು ಕೋಷ್ಟಕದಲ್ಲಿ ಅಡ್ಡಸಾಲು ಹಾಗು ಕಂಬಸಾಲುಗಳಾಗಿ ವರ್ಗಿಕರಿಸಿದರು. ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆಯ ಕ್ರಮದಲ್ಲಿ ಬರೆದರು. 

೧೮೮೭ರಲ್ಲಿ ಆಮ್ಲ, ಪ್ರತ್ಯಾಮ್ಲ, ಮತ್ತು ಲವಣಗಳು ನೀರಿನಲ್ಲಿ ಕರಗಿ ಅಯಾನ್ಗಳಾಗಿ ಬೇರ್ಪಡುತ್ತವೆ ಎಂದು ಕಂಡುಕೊಂಡರು.

೧೮೯೮ರಲ್ಲಿ ವಿಲಿಯಂ ರಾಮಸೇ  ಎನ್ನುವ ವಿಜ್ಞಾನಿ, ಜಡ ಅನಿಲಗಳನ್ನು ಕಂಡುಹಿಡಿದರು.

೧೯೦೦ರ ಹೊತ್ತಿಗೆ ಧಾತುಗಳ ಸಂಖ್ಯೆ ೮೮ಕ್ಕೆ ತಲುಪಿತು.

೧೮೯೭ರಲ್ಲಿ ಜೆ ಜೆ ಥಾಮ್ಸನ್ನರು ಕ್ಯಾಥೋಡ್ ಕಿರಣಗಳ ಪ್ರಯೋಗ ಮಾಡಿ, ಎಲ್ಲಾಧಾತುಗಳ ಪರಮಾಣುಗಳು  ಎಲೆಕ್ಟ್ರಾನ್ ಗಳೆಂಬ ಉಪಕಣಗಳು ಹೊಂದಿವೆ ಎಂದು ವಿವರಿಸಿದರು. ಎಲೆಕ್ಟ್ರಾನ್ ಗಳು ಋಣ ವಿದ್ಯುತ್ ಆವೇಶ ಹೊಂದಿರುತ್ತವೆ.

೧೯೧೧ರ ಹೊತ್ತಿಗೆ ಪರಮಾಣುವೂ ಋಣ ವಿದ್ಯುತ್ ಆವೇಶಯುಳ್ಳ ಎಲೆಕ್ಟ್ರಾನ್ ಮತ್ತು ಧನ ಆವೇಶಯುಳ್ಳ ಬೀಜಕೇಂದ್ರ ಹೊಂದಿದೆ ಎಂದು ರದರಫೋರ್ಡರ ಪ್ರಯೋಗಗಳಿಂದ ಖಚಿತವಾಯಿತು. ಮೂಲತಃ ಪರಮಾಣುವಿನ ರಾಶಿಯು ಬೀಜಕೇಂದ್ರದ್ದೇ ಆಗಿದೆ. ಎಲೆಕ್ಟ್ರಾನಿನ ರಾಶಿಯು ನಗಣ್ಯ .

೧೯೧೩ರಲ್ಲಿ ಡೆನ್ಮಾರ್ಕಿನ ವಿಜ್ಞಾನಿ ನೀಲ್ಸ ಬೊಹರರು, ಹೈಡ್ರೋಜನ್ ಪರಮಾಣುವಿನ ರಚನಾ ಸಿಧಾಂತವನ್ನು ಎಸೆಸ್ವಿಯಾಗಿ ವಿವರಿಸಿದರು. ಪರಮಾಣುವಿನ ಬೀಜಕೇಂದ್ರದ ಸುತ್ತ ಎಲೆಕ್ಟ್ರಾನ್ ನಿರ್ಧಾರಿತ ಶಕ್ತಿ ಕವಚದಲ್ಲಿ ಮಾತ್ರ ಸುತ್ತುತ್ತಿರುತ್ತದೆ. ಪರಮಾಣುವಿನ ಹೆಚ್ಚಿನ ಗಾತ್ರ ಎಲೆಕ್ಟ್ರಾನುಗಳೇ ಆಕ್ರಮಿಸಿಕೊಂಡಿರುತ್ತವೆ.

೧೯೧೪ರಲ್ಲಿ ಆಂಗ್ಲ ವಿಜ್ಞಾನಿ ಹೆನ್ರಿ ಮೊಸೆಲಿಯವರಿಂದ ಪರಮಾಣು ಸಂಖ್ಯೆಯ ವ್ಯಾಖ್ಯಾನ ನೀಡಲಾಯಿತು. ಪರಮಾಣು ಸಂಖ್ಯೆಯು ಪರಮಾಣು ಬೀಜ ಹೊಂದಿರುವ ಒಟ್ಟು ಪ್ರೋಟಾನ್ ಗಳ  ಸಂಖ್ಯೆಗೆ ಸಮ ಇರುತ್ತದೆ. ಇದಾದನಂತರ ಧಾತುಗಳ ಆವರ್ತಕ ಕೋಷ್ಟಕವನ್ನು ಧಾತುಗಳ ಪರಮಾಣು ಸಂಖ್ಯೆ ಬಳಸಿ ಕೋಷ್ಠಕದ ನ್ಯೂನತೆಗಳನ್ನು ತಿದ್ದಲಾಯಿತು. ಆಧುನಿಕ ಆವರ್ತಕ ಕೋಷ್ಟಕದಲ್ಲಿ ೧೮ ಕಂಭ ಸಾಲುಗಳಿವೆ.

೧೯೧೬ರಲ್ಲಿ ಜ್ಯೂಲಿಯಸರಿಂದ, ಅಯಾನಿಕ್ ಸಂಯುಕ್ತಗಳ ರಚನೆಯಲ್ಲಿ, ಪರಮಾಣುಗಳ  ಅಷ್ಟಕ ನಿಯಮ ನಿರೂಪಣೆ.

೧೯೧೬ರಲ್ಲಿ ಅಮೆರಿಕೆಯ ವಿಜ್ಞಾನಿ ಜಿ. ಎನ್. ಲೆವಿಸರು, ರಾಸಾಯನಿಕ ಸಹವೇಲೆನ್ಸಿ ಬಂಧದ ನಿರೂಪಣೆ ಕೊಟ್ಟರು. ಲೆವಿಸರು ಸಹವಾಲೆನ್ಸಿ ಬಂಧ ಬಳಸಿ, ಸಂಯುಕ್ತ ಕಣಗಳ ಅಣುರಚನೆಯನ್ನು ಎಸೆಸ್ವಿಯಾಗಿ ವಿವರಿಸಿದರು. 

ಅವರು, ೧೯೨೩ರಲ್ಲಿ ಲೆವಿಸ್ ಆಮ್ಲ ಮತ್ತು ಪ್ರತ್ಯಾಮ್ಲಗಳ ಪರಿಕಲ್ಪನೆ ಕೊಟ್ಟರು. ರಾಸಾಯನಿಕ ಬದಲಾವಣೆಯಲ್ಲಿ, ಲೆವಿಸ್ ಆಮ್ಲಗಳು, ಇಲೆಕ್ಟ್ರಾನ್ ಜೋಡಿಯನ್ನು [ಪ್ರತ್ಯಾಮ್ಲಗಳಿಂದ] ಸ್ವೀಕರಿಸುತ್ತವೆ.

೧೯೧೯ರಲ್ಲಿ ರದರ್ಫೋರ್ಡರು, ಪರಮಾಣು ಬೀಜಕೇಂದ್ರದಲ್ಲಿರುವ  ಧನಾವೇಶಯುಳ್ಳ ಪ್ರೋಟಾನ್ ಕಣವನ್ನು ಕಂಡುಹಿಡಿದರು.

೧೯೨೪ರಲ್ಲಿ ಬ್ರೊಗ್ಲೆಯವರಿಂದ ಎಲೆಕ್ಟ್ರಾನಿನ ರಚನಾ ರೂಪ, ಅಲೆ ಹಾಗೂ ಕಣ ಎನ್ನುವ ದ್ವಿಗುಣ ಪ್ರಕೃತಿಯ ನಿರೂಪಣೆ.

೧೯೨೬ರಲ್ಲಿ ಶ್ರೋಡಿಂಗರರಿಂದ ಪರಮಾಣುವಿನ ರಚನೆಯ ಶಕಲಸಿಧಾಂತದ ನಿರೂಪಣೆ.

೧೯೩೨ರಲ್ಲಿ ಜೇಮ್ಸ್ ಚಾಡ್ವಿಕ್ ರವರು, ಪರಮಾಣು ಬೀಜಕೇಂದ್ರ ಹೊಂದಿರುವ ನ್ಯೂಟ್ರಾನ್ ಎನ್ನುವ ಉಪಕಣವನ್ನು ಕಂಡುಹಿಡಿದರು. ಈ ಕಣಕ್ಕೆ ಯಾವುದೇ ವಿದ್ಯುತ್ ಆವೇಷ ಇಲ್ಲ. ಹೀಗೆ ಒಂದು ಪರಮಾಣುವೂ ಎಲೆಕ್ಟ್ರಾನ್, ಪ್ರೋಟಾನ್, ಮತ್ತು ನ್ಯೂಟ್ರಾನ್ ಎನ್ನುವ ಸೂಕ್ಷ್ಮ ಕಣಗಳಿಂದ ಆಗಿದೆ. ಪ್ರೋಟಾನ್ ಅಥವಾ ನ್ಯೂಟ್ರಾನ್ ಕಣದ ರಾಶಿಗೆ ಹೋಲಿಸಿದರೆ ಎಲೆಕ್ಟ್ರಾನ್ ರಾಶಿಯು ನಗಣ್ಯ ಎನಿಸುತ್ತದೆ. ಆದರೆ ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ವಿದ್ಯುತ್ ಆವೇಶವು ಸಮ ಇರುತ್ತದೆ.  ಒಂದು ಪರಮಾಣುವಿನ ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ಸಂಖ್ಯೆ ಸಮಾನವಾಗಿರುತ್ತದೆ.

No comments:

Post a Comment